ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ನಾಲ್ಕು ಜಿಲ್ಲೆಗಳಿಂದ ಏಳುನೂರು ಯಾತ್ರಿಗಳು ಪವಿತ್ರ ಹಜ್ ಯಾತ್ರೆಗೆ ಸಜ್ಜು

ಉಡುಪಿ: ನಾಲ್ಕು ಜಿಲ್ಲೆಗಳಿಂದ ಏಳುನೂರು ಯಾತ್ರಿಗಳು ಪವಿತ್ರ ಹಜ್ ಯಾತ್ರೆಗೆ ಸಜ್ಜು

Sat, 17 Oct 2009 02:44:00  Office Staff   S.O. News Service
ಉಡುಪಿ, ಅ.೧೬: ಪವಿತ್ರ ಹಜ್ಜ್  ಯಾತ್ರೆ ಈ ಬಾರಿ ರಾಜ್ಯದಲ್ಲಿ ಅ.೨೫ರಂದು ಪ್ರಾರಂಭಗೊಳ್ಳಲಿದ್ದು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡಗಳಿಂದ ಈ ಬಾರಿ ಒಟ್ಟು ೭೦೦ ಮಂದಿ ಹಜ್ಜ್  ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಹಜ್ಜ್ ಸಮಿತಿಯ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಸಲೀಂ ಅಂಬಾಗಿಲು ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಯಾತ್ರಿಕರಿಗೆ ಮಂಗಳೂರನ್ನು ಎರಡನೆ ನಿರ್ಗಮನ ಕೇಂದ್ರವಾಗಿ ಕೇಂದ್ರ ಸರಕಾರ ಮಾನ್ಯತೆ ನೀಡಿದೆ ಎಂದು ಅವರು ಹೇಳಿದರು. ಅ.೨೪ರಂದು ಹಜ್ಜ್ ಕ್ಯಾಂಪ್‌ನ ಉದ್ಘಾಟನೆ ನಡೆಯಲಿದ್ದು, ೨೫ರಿಂದ ಪ್ರತಿ ದಿನ ೧೧೨ ಮಂದಿ ಹಜ್ಜ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದವರು ಹೇಳಿದರು.

ಈ ಬಾರಿ ರಾಜ್ಯದಿಂದ ಒಟ್ಟು ೨೩,೦೦೦ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ೫,೭೫೦ ಮಂದಿಯನ್ನು ಆನ್‌ಲೈನ್ ಮೂಲಕ ಹಜ್ ಯಾತ್ರೆಗೆ ಆಯ್ಕೆ ಮಾಡಲಾಗಿದೆ. ಈ ಯಾತ್ರಿಕರೊಂದಿಗೆ ಅವರ ಸಹಾಯಕರೂ ಸೇರಿದಂತೆ ಒಟ್ಟು ೬,೦೦೦ ಮಂದಿ ತೆರಳಲಿದ್ದಾರೆ ಎಂದವರು ತಿಳಿಸಿದರು.

ಹಜ್ ಯಾತ್ರೆ ಒಟ್ಟು ೪೪ ದಿನಗಳ ಕಾರ್ಯಕ್ರಮವಾಗಿದ್ದ್ದು, ಡಿ.೭ರಿಂದ ೧೨ರೊಳಗೆ ರಾಜ್ಯದ ಎ ಯಾತ್ರಿಕರೂ ಹಿಂದಿರುಗಲಿದ್ದಾರೆ. ಖಾಸಗಿಯಾಗಿ ಹಜ್ ಯಾತ್ರೆಗೆ ೨.೩೦ ಲಕ್ಷ ರೂ.ಖರ್ಚಾದರೆ, ರಾಜ್ಯ ಸರಕಾರದಿಂದ ಗರಿಷ್ಠ ೧.೧೬ ಲಕ್ಷ ರೂ.ಖರ್ಚಾಗುತ್ತಿದೆ ಎಂದು ಸಲೀಂ ಹೇಳಿದರು.

ಹಜ್ ಯಾತ್ರಿಕರಿಗಾಗಿ ಅ.೨೦ರಂದು ಮಂಗಳೂರಿನ ಪುರಭವನದಲ್ಲಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಹಜ್ ಘರ್ ನಿರ್ಮಾಣಕ್ಕಾಗಿ ನಿವೇಶನ ಖರೀದಿಗೆ ೨.೫ ಕೋಟಿ ರೂ. ಹಾಗೂ ಹಜ್ ಭವನ ನಿರ್ಮಾಣಕ್ಕೆ ಐದು ಕೋಟಿ ರೂ.ಗಳನ್ನು ನೀಡಿದ್ದಾರೆ ಎಂದೂ ಸಲೀಂ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಜ್ ಸಮಿತಿಯ ಸದಸ್ಯರಾದ ಹುಸೈನ್ ಸಖಾಫಿ ಎಮ್ಮೆಮಾಡು ಕೊಡಗು, ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆರಿಫ್ ಕಲ್ಲೊಟ್ಟೆ, ಕೆ.ಎ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕಲ್ಕಟ್ಟ ಉಪಸ್ಥಿತರಿದ್ದರು.

Share: