ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕಾನೂನಿನ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕ ಪ್ರೊ.ಸಿ.ಎಸ್. ಪಾಟೀಲ

ಕಾನೂನಿನ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕ ಪ್ರೊ.ಸಿ.ಎಸ್. ಪಾಟೀಲ

Tue, 27 Apr 2010 17:51:00  Office Staff   S.O. News Service

ಧಾರವಾಡ,ಏ,೨೭: ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಾಗ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿ ಪರಿಪೂರ್ಣವಾಗಲು ಸಾಧ್ಯವೆಂದು ಕಾನೂನು ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಪ್ರೊ.ಸಿ.ಎಸ್. ಪಾಟೀಲ ತಿಳಿಸಿದರು.
ಕಾನೂನು ಸಾಕ್ಷರತಾ ರಥ ಯಾತ್ರೆಯ ಅಂಗವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಭದ್ರತೆಯ, ದೈಹಿಕ ತೃಪ್ತಿಯ ಹಾಗೂ ಗೌರವದ ಬದುಕು ಹೀಗೆ ಸಾಮಾಜಿಕ ಭದ್ರತೆಗಳು ಮೂಲಭೂತವಾಗಿ ಬೇಕಾಗಿವೆ.  ಇವೆಲ್ಲಾ ಆಗಬೇಕಾದರೆ ಮಾನವ ಹಕ್ಕುಗಳನ್ನು ಪ್ರತಿಯೊಬ್ಬರು ತಿಳಿಯಬೇಕು ಹಾಗೂ ಅನುಸರಿಸಬೇಕೆಂದರು.  ಮಾನವ ಹಕ್ಕುಗಳ ನ್ಯಾಯಾಲಯವು ಇಡೀ ಭಾರತದ ಕರ್ನಾಟಕದಲ್ಲಿ ಮಾತ್ರ ಸ್ಥಾಪಿತವಾಗಿರುವುದು ಸಂತೋಷದ ವಿಷಯವಾಗಿದೆ.  ನ್ಯಾಯಾಲಯ ಹಾಗೂ ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಯಪಡಿಸುವುದೇ ಈ ಕಾನೂನು ಸಾಕ್ಷರತಾ ರಥದ ಉದ್ದೇಶವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಲು ಅವಕಾಶ ಕೊಡಬಾರದಲ್ಲದೆ ನ್ಯಾಯದಾನದ ವ್ಯವಸ್ಥೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಎಲ್ಲರಿಗೂ ನ್ಯಾಯ ದೊರೆಯುವಲ್ಲಿ ಸಹಾಯವಾಗುತ್ತದೆ ಎಂದು ಶ್ರೀ ಪಾಟೀಲ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಜಾನ್ ಮೈಕಲ್.ಡಿ.ಕುನ್ನಾ ಅವರು ಮಾತನಾಡಿ, ಗ್ರಾಮೀಣ ಭಾಗಗಳ ಮೂಲೆ ಮೂಲೆಗೆ ಹೋಗಿ ಕಾನೂನಿನ ಬಗ್ಗೆ ಅರಿವನ್ನು ಮತ್ತು ಮಾಹಿತಿ ನೀಡುವ ಉದ್ದೇಶ ಈ ಸಾಕ್ಷರತಾ ರಥ ಹೊಂದಿದೆಯೆಂದರು.  ದಿನನಿತ್ಯದ ವ್ಯವಹಾರಕ್ಕಾಗಿ ಅನೇಕ ಕಾನೂನುಗಳಿದ್ದು, ಅವುಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು.  ತಿಳಿದವರೇ ಹೆಚ್ಚಾಗಿ ಕಾನೂನು ಚ್ಯುತಿಗೆ ಪ್ರಯತ್ನ ಮಾಡುತ್ತಾರೆ ಅದು ನಡೆಯಕೂಡದು ಅಂತಹವರ ಮೇಲೆ ಶಿಸ್ತಿನ ಕ್ರಮ ಕೈಕೊಳ್ಳಲು ಕಾನೂನುಗಳು ಇವೆಯೆಂದು ಮೊದಲು ತಿಳಿದಿರಬೇಕು.  ಪ್ರತಿಯೊಬ್ಬರೂ ಕಾಯ್ದೆ-ಕಾನೂನನ್ನು ಅರಿತು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಸಮಾಜ ಶಾಂತಿಯಿಂದಿರಲು ಸಾಧ್ಯವಾಗುತ್ತದೆಯೆಂದರು.
ಆರಂಭದಲ್ಲಿ ಕಾನೂನು ವಿದ್ಯಾರ್ಥಿನಿ ಕು.ಅಖಿಲಾ ಪಂಡಿತ ಪ್ರಾರ್ಥನೆ ಹಾಡಿದರು.  ಪ್ರಧಾನ ದಿವಾಣಿ ನ್ಯಾಯಾಧೀಶರಾದ (ಹಿ.ಶ್ರೇ) ಶ್ರೀ ಬಿರಾದಾರ ದೇವಿಂದ್ರಪ್ಪ .ಎನ್. ಸ್ವಾಗತಿಸಿದರು. ಶ್ರೀ ಪ್ರಕಾಶ ಹುಕ್ಕೇರಿ ವಂದಿಸಿದರು. ಶ್ರೀ ಬಸವಪ್ರಭು ಹೊಸಕೇರಿ ಅವರು ನಿರೂಪಿಸಿದರು.  ರಂಗಭಾರತ ಕಲಾವಿದರಿಂದ ಕಾನೂನು ಸಾಕ್ಷರತೆ ಕುರಿತು ಒಂದು ಕಿರುನಾಟಕ ಪ್ರದರ್ಶನಗೊಂಡಿತು.  
ಇದಕ್ಕೂ ಮೊದಲು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಜಾನ್ ಮೈಕಲ್.ಡಿ.ಕುನ್ನಾ ಅವರು ಕಾನೂನು ಸಾಕ್ಷರತಾ ರಥಕ್ಕೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.  ನಂತರ ಕಾನೂನು ಅರಿವು-ನೆರವು, ಮಾಹಿತಿ ಹಕ್ಕು ಅಧಿನಿಯಮ, ಮಾನವ ಹಕ್ಕುಗಳು ಹಾಗೂ ಗ್ರಾಹಕರ ಹಿತರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು.  ಕಾನೂನು ಸಾಕ್ಷರತಾ ರಥ ಇಂದು ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಹಾಗೂ ಗರಗ ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕಾನೂನು ಅರಿವು-ನೆರವು ನೀಡುವ ಮೂಲಕ ಜಾಗೃತಿ ಮೂಡಿಸಿತು.  ಸಮಾರಂಭದಲ್ಲಿ ನ್ಯಾಯಧೀಶರು, ನ್ಯಾಯವಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Share: