ಕೋಲಾರ: ಆರ್ಥಿಕ ಅಸಮಾನತೆ ಹೋಗಲಾಡಿಸುವ ಶಕ್ತಿ ಇರುವ ಸಹಕಾರಿ ರಂಗದ ಸೌಲಭ್ಯಗಳನ್ನು ಪತ್ರಕರ್ತರು ಸದುಪಯೋಗ ಪಡಿಸಿ ಕೊಳ್ಳ ಬೇಕು, ಸ್ವಾವಲಂಬಿ ಜೀವನಕ್ಕೆ ದಾರಿ ಕಂಡುಕೊಳ್ಳಬೇಕು ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ವಿ. ಗೋಪಿನಾಥ್, ಸದಸ್ಯರಿಗೆ ಸಾಲ ತೆಗೆದುಕೊಳ್ಳುವಾಗ ಇರುವ ಮುತುವರ್ಜಿ ಸಾಲ ಮರುಪಾವತಿಸುವಾಗಲೂ ಇರಬೇಕು, ಮರುಪಾವತಿಯಲ್ಲಿ ಲೋಪ ಎಸಗುವ ಸದಸ್ಯರಿಗೆ ಮತ್ತೊಮ್ಮೆ ಸಾಲ ನೀಡಬಾರದು ಎಂದರು.
ಆಯವ್ಯಯ ಮಂಡನೆ ೧.೩೨ ಲಕ್ಷ ಲಾಭ: ಆಯವ್ಯಯ ಮಂಡಿಸಿದ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಈವರೆಗೂ ೮೩.೧೪ ಲಕ್ಷ ವಹಿವಾಟು ನಡೆಸುವ ಮೂಲಕ ೧.೩೨ ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಹಕಾರ ರಂಗದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಪಾಡಲಾಗಿದೆ. ಪ್ರತಿ ಪೈಸೆ ಹಣವನ್ನೂ ದುರ್ವಿನಿಯೋಗಕ್ಕೆ ಅವಕಾಶ ನೀಡದೇ ಉಳಿಸಲಾಗಿದೆ ಎಂದು ತಿಳಿಸಿ , ಸಭೆಯಲ್ಲಿ ಸಂಘದ ಕಾರ್ಯದರ್ಶಿ ಗಂಗಾಧರ್ಗೆ ೨೦ ಸಾವಿರ ರೂ ಗೌರವ ಭತ್ಯೆ ನೀಡಲು ಸಂಘ ಅನುಮೋದನೆ ನೀಡಿದೆ , ಮತ್ತು ಬಂದಿರುವ ಸಾಲದ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸಲಾಯಿತೆಂದು ಘೋಷಿಸಿದರು.
ಸಭೆಯಲ್ಲಿ ಹಿರಿಯ ಸಹಕಾರಿ ಅಬ್ಬಣಿ ಶಂಕರ್, ಸಹಕಾರ ರಂಗದಲ್ಲಿ ಪ್ರಶ್ನಿಸುವ ಮನೋಭಾವ ಅಗತ್ಯ ಯಾರೇ ಸಾಲ ಮರುಪಾವತಿಯಲ್ಲಿ ಲೋಪ ಎಸಗಿದರೆ ನೇರವಾಗಿ ಪ್ರಶ್ನಿಸಿ ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಚಂದ್ರಶೇಖರ್ ಪ್ರಾರ್ಥಿಸಿ, ಸಂಘದ ನಿರ್ದೇಶಕ ಎ.ಜಿ.ಸುರೇಶ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ್ ವಂದಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಸಂಘದ ನಿರ್ದೇಶಕರಾದ ಎ. ಸದಾನಂದ ಹೆಚ್. ಎನ್. ಮುರಳಿಧರ್, ಎಸ್. ಎನ್. ಪ್ರಕಾಶ್, ಬಿ. ಸುರೇಶ್, ಎಂ.ನಾಗರಾಜಯ್ಯ, ಎಂ. ನಾರಾಯಣಪ್ಪ, ರಾಮಮೂರ್ತಿ, ಪಿ. ಎನ್. ದಾಸ್, ಎನ್. ಮುನಿಯಪ್ಪ, ವೆಂಕಟೇಶ ಬಾಬಾ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸಂಘದ ನೂರಾರು ಮಂದಿ ಸದಸ್ಯರು ಹಾಜರಿದ್ದರು.