ಬಂಟ್ವಾಳ, ಫೆಬ್ರವರಿ 28:ಕೇಲ್ದೋಡಿ ಶ್ರೀವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವವು ಫೆ.೨೮ರಿಂದ ಆರಂಭಗೊಂಡಿದ್ದು,ಮಾ.೨ರತನಕ ನಡೆಯಲಿದೆ.
ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಅಂಚನ್ ಬಿಸಿರೋಡಿನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು. ಫೆ.೨೮ರಂದು ಮಹಿಸಂದಾಯ, ರಕ್ತೇಶ್ವರಿ, ಶ್ರೀವೈದ್ಯನಾಥ ದೈವದ ನೇಮೋತ್ಸವ ದೊನದಿಗೆ ಜಾತ್ರೊತ್ಸವಕಕೆ ಚಹಲನೆ ದೊರಕಿದೆ. ಮಾ.೧ರಂದು ಕೊಡಮಣಿತ್ತಾಯಿ, ಕಲ್ಲುಡ-ಕಲ್ಲುರ್ಟಿ ದೈವಗಳ ನೇಮೋತ್ಸವ, ನವಶಕ್ತಿ ಮಹಿಳಾ ಮಂಡಲದ ಸದಸ್ಯೆಯರಿಂದ ಪುರುಷೋತ್ತಮ ಅಂಚನ್ ನಿರ್ದೇಶನದಲ್ಲಿ "ಗಂಗಾರಾಮ್" ತುಳುನಾಟಕ ನಡೆಯಲಿದೆ.
ಮಾ.೨ರಂದು ಬ್ರಹ್ಮಬೈದರ್ಕಳ ಜಾತ್ರೆ ನಡೆಯಲಿದ್ದು ಈ ಬಾರಿ ಪ್ರಥಮವಾಗಿ ಸಾಧಕರಿಗೆ "ಕೇಲ್ದೋಡಿ ಅನುಗ್ರಹ ಪ್ರಶಸ್ತಿ ಪ್ರದಾನ" ನೆರವೇರಲಿದೆ. ಸಮಾರಂಭದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಎಚ್.ಹಾಲಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್, ಕರಾವಳಿ ಅಭಿವೃದ್ದಿ ಪಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಶಾಸಕ ಬಿ.ರಮಾನಾಥ ರೈ, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ ಮೊದಲಾದವರು ಉಪಸ್ಥಿತರಿರುವರು.
ಶ್ರೀಕ್ಷೇತ್ರ ಕನ್ಯಾಡಿಯ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡುವರು.
ಚಲನಚಿತ್ರ ನಿರ್ದೇಶಕ ಶಿವಧ್ವಜ್, ಮುಂಗಾರುಮಳೆ ಖ್ಯಾತಿಯ ಯೋಗರಾಜ್ ಭಟ್, ನಾಯಕ ನಟರಾದ ದಿಗಂತ್, ವಿಜಯ ರಾಘವೇಂದ್ರ, ರಾಜು ತಾಳಿಕೋಟೆ, ಶಿವಮಿತ್ರ, ಪದ್ಮಜಾ ರಾವ್ ಭಾಗವಹಿಸುವರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತುಳು ಚಲನಚಿತ್ರ "ಗಗ್ಗರ" ಪ್ರದರ್ಶನ, ಲಕುಮಿ ತಂಡದ "ಬೆನ್ಪಿನೊರಿ ತಿನ್ಪಿನೊರಿ" ತುಳುನಾಟಕ ಪ್ರದರ್ಶನವಿದೆ.
ಈ ಸಂದರ್ಭದಲ್ಲಿ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಬಿ.ಕೆ.ಶಿವರಾಂ, ಉದ್ಯಮಿ ಎ.ಕೆ.ಸುಂದರ ಸಾಲ್ಯಾನ್, ವಿಶ್ವನಾಥ ಎ.ಸನಿಲ್, ಶಿವಧ್ವಜ್ ಅವರನ್ನು ಪುರಸ್ಕರಿಸಲಾಗುವುದು ಎಂದು ಪ್ರಕಾಶ್ ಅಂಚನ್ ತಿಳಿಸಿದರು. ಪದಾಧಿಕಾರಿಗಳಾದ ಕರುಣೇಂದ್ರ ಪೂಜಾರಿ, ಪುರುಷೋತ್ತಮ ಅಂಚನ್, ಶ್ರೀನಿವಾಸ ಬಂಗೇರ ಉಪಸ್ಥಿತರಿದ್ದರು.