ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ: ರೆಡ್ಡಿಗಳ ಗಣಿ ಸ್ಥಗಿತಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಆದೇಶ

ನವದೆಹಲಿ: ರೆಡ್ಡಿಗಳ ಗಣಿ ಸ್ಥಗಿತಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಆದೇಶ

Sat, 21 Nov 2009 02:38:00  Office Staff   S.O. News Service

ಈ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಮುಂದಿನ ವಾರ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆಯಿದೆ. ರೆಡ್ಡಿಯ ಓಬಳಾಪುರಂ ಮೈನಿಂಗ್ ಕಾರ್ಪೋರೇಶನ್ ಮೀಸಲು ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂದು ಆಂಧ್ರಪ್ರದೇಶದ ಪ್ರತಿಪಕ್ಷಗಳು (ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ನೇತೃತ್ವದಲ್ಲಿ) ಪ್ರತಿಭಟನೆ ನಡೆಸಿದ್ದವು.

ಇದೀಗ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯದ ಸಮಿತಿಯೊಂದು ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿದ್ದು, ಅನುಮತಿ ಇರುವ ಪ್ರದೇಶದಲ್ಲಿ ಮಾತ್ರವೇ ಗಣಿಗಾರಿಕೆ ನಡೆಯುತ್ತಿದೆಯೇ ಇಲ್ಲವೇ ಎಂಬ ಕುರಿತು ತಜ್ಞರ ಸ್ವತಂತ್ರ ತಂಡವೊಂದನ್ನು ರಚಿಸಿ ತಪಾಸಣೆ ನಡೆಸಬೇಕು, ಅದುವರೆಗೂ ಗಣಿಗಾರಿಕೆ ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದೆ.

ಇದಲ್ಲದೆ, ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿಲ್ಲ ಎಂದು ಸುಳ್ಳು ಹೇಳಿದ ಆಂಧ್ರ ಪ್ರದೇಶ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿರುವ ಸಮಿತಿ, ಲೀಸ್ ಒಪ್ಪಂದದಲ್ಲಿ ಉಲ್ಲೇಖಿತವಾಗದಿರುವ ಪ್ರದೇಶದಲ್ಲಿ ನಡೆಸಿದ ಗಣಿಗಾರಿಕೆಯಿಂದ ಹೊರತೆಗೆದ ಅದಿರಿಗೆ ಮೌಲ್ಯಕ್ಕೆ ಅನುಗುಣವಾಗಿ ರೆಡ್ಡಿ ಭಾರೀ ಮೊತ್ತದ ದಂಡ ತೆರುವಂತೆಯೂ ಸಮಿತಿ ಶಿಫಾರಸು ಮಾಡಿದೆ.

ರೆಡ್ಡಿ ಗಣಿಗಾರಿಕೆಯು ಅಕ್ರಮವಾಗಿಲ್ಲ ಎಂದು ಈ ಮೊದಲು ಆಂಧ್ರ ಸರಕಾರ ಹೇಳಿತ್ತು. ರಾಜ್ಯ ಸರಕಾರವೊಂದು ನ್ಯಾಯಯುತವಾಗಿ, ನಿಷ್ಪಕ್ಷಪಾತತನದಿಂದ ವರ್ತಿಸಲು ವಿಫಲವಾಗಿರುವುದು ಆಘಾತಕಾರಿ ಮತ್ತು ಅದರ ಮೇಲೆ ವಿಶ್ವಾಸ ಹೋಗಲು ಕಾರಣವಾಗಿದೆ ಎಂದು ಸಮಿತಿ ಹೇಳಿದೆ.

ಇದೀಗ ಮುಂದಿನ ವಾರ ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ಪರಾಮರ್ಶೆ ನಡೆಯಲಿದೆ.

ಅಕ್ರಮ ಗಣಿ-ಸಿಬಿಐ ತನಿಖೆ ಅನಗತ್ಯ: ಯಡಿಯೂರಪ್ಪ 

ಆಂಧ್ರದ ಓಬಳಾಪುರಂನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐ ತನಿಖೆ ನಡೆಸುವುದು ಅನಾವಶ್ಯಕ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯಲ್ಲಿ ಶುಕ್ರವಾರ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವ ಆಸರೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಮುನ್ನ ತಿಂಥಣಿ ಮೌನೇಶ್ವರ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಂಧ್ರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐ ತನಿಖೆ ನಡೆಸಲು ಆಂಧ್ರ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಮುಖ್ಯಮಂತ್ರಿಗಳು ಗಣಿಗಾರಿಕೆಯ ಬಗ್ಗೆ ಸಿಬಿಐ ತನಿಖೆ ನಡೆಸುವುದು ಅನಾವಶ್ಯಕ ಮತ್ತು ಅನಗತ್ಯ ಎಂದರು.

ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಅಗತ್ಯ ನೆರವು ಕಲ್ಪಿಸಲು ಕೇಂದ್ರ ಸರ್ಕಾರ ಇದುವರೆಗೆ 660ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಉಳಿದ ಹಣ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸ ಇರುವುದಾಗಿ ತಿಳಿಸಿದರು


Share: