ಕೊಚ್ಚಿ, ಎ.25: ದುಬೈಯಿಂದ ಕೊಚ್ಚಿಗೆ 364 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಎಮಿರೇಟ್ಸ್ ಏರ್ಲೈನ್ಸ್ ವಿಮಾನ ವೊಂದು ಇಳಿಯುವುದಕ್ಕೆ ಸ್ವಲ್ಪವೆ ಮೊದಲು ಬೆಂಗಳೂರಿನ ವಾಯು ಪ್ರದೇಶದಲ್ಲಿ ಮೋಡ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಹಾರಾಟ ನಡೆಸಿದ ಪರಿಣಾಮವಾಗಿ ಸುಮಾರು 23 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಗಾಯಗಳಾಗಿವೆ.
ಮುಂಜಾನೆ 7ರ ವೇಳೆ ಈ ಘಟನೆ ಸಂಭವಿಸಿದ್ದು, ವಿಮಾನವು ಒಮ್ಮೆಲೇ 20 ಸಾವಿರ ಅಡಿಗಳಿಂದ 5 ಸಾವಿರ ಅಡಿ ಕೆಳಗೆ ಜಾರಿತು. ಕೂಡಲೇ ಚಾಲಕ ವಿಮಾನವನ್ನು ನಿಯಂತ್ರಣಕ್ಕೆ ತಂದುದರಿಂದ ಹೆಚ್ಚಿನ ಅನಾಹುತ ತಪ್ಪಿ ಹೋಯಿತು. ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಈ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ.
350 ಪ್ರಯಾಣಿಕರು ಹಾಗೂ 14 ಸಿಬ್ಬಂದಿಯಿದ್ದ ಬೋಯಿಂಗ್ ವಿಮಾನವು ಬೆಂಗಳೂರಿನ ಬಳಿ ಮೋಡಗಳೆಡೆ ಸಿಲುಕಿಕೊಂಡಿತು. ಇಳಿಯುವ ಸ್ವಲ್ಪ ಮೊದಲು ಸಂಭವಿಸಿದ ಈ ತೊಂದರೆಯಿಂದಾಗಿ ವಿಮಾನ ನಿಯಂತ್ರಣ ತಪ್ಪಿ 23 ಮಂದಿ ಗಾಯ ಗೊಂಡರೆಂದು ಎಮಿರೇಟ್ಸ್ ವಿಮಾನ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.ಘಟನೆಯ ಕುರಿತು ತನಿಖೆಯೊಂದಕ್ಕೆ ಆದೇಶಿಸಲಾಗಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಹಾರಾಟ ಸುರಕ್ಷೆಯ ಬಗ್ಗೆ ತನಿಖೆ ನಡೆಸಲಿದ್ದಾರೆ. ಅನುಮತಿ ನೀಡಿದ ಬಳಿಕವಷ್ಟೇ ವಿಮಾನ ಭಾರತದಿಂದ ಹೋಗಲಿದೆಯೆಂದು ಡಿಜಿಸಿಎ ನಝೀಂ ಝೈದಿ ತಿಳಿಸಿದ್ದಾರೆ.ಅಧಿಕಾರಿಗಳು ಗಾಯಾಳುಗಳು, ಸಿಬ್ಬಂದಿ ಹಾಗೂ ಪೈಲಟ್ಗಳ ಹೇಳಿಕೆ ದಾಖಲಿಸಲು ಆರಂಭಿಸಿದ್ದಾರೆಂದು ಅವರು ಹೇಳಿದ್ದಾರೆ.
ಬಿಜು ಥೋಮಸ್ ಎಂಬ ಪ್ರಯಾಣಿಕನ ಭುಜದ ಕೀಲು ಜಾರಿದ್ದು ಆತನನ್ನು ಸಮೀಪದ ಅಂಗಮಲ್ಲಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಗಳಲ್ಲಿ ಒಂದು ಮಗುವೂ ಸೇರಿದೆ.ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಪೈಲಟ್ಗಳು ವೈದ್ಯಕೀಯ ನೆರವು ಯಾಚಿಸಿದ್ದರೆಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಆಘಾತಗೊಂಡ ವರಂತಿದ್ದು, ಚಿಂತಾಕ್ರಾಂತರಾಗಿ ದ್ದಾರೆಂದು ಅವು ಹೇಳಿವೆ.
ಸುಮಾರು 7 ಮಂದಿ ಪ್ರಯಾಣಿಕರನ್ನು ನಿಲ್ದಾಣದ ಅಮೃತ ವೈದ್ಯಕೀಯ ತಪಾಸಣೆ ಕೊಠಡಿಗೆ ಕರೆತರಲಾಯಿತು. ಹಲವರಿಗೆ ತಲೆ, ಹುಬ್ಬು, ಕುತ್ತಿಗೆ ಹಾಗೂ ಭುಜಗಳಲ್ಲಿ ಗಾಯಗಳಾಗಿವೆ.ವಿಮಾನ 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಸ್ವಲ್ಪ ಕಾಲ ಅಡಚಣೆ ಅನುಭವಿಸಿ, 200 ಅಡಿಗಳಷ್ಟು ಕೆಳಗೆ ಜಾರಿತು. ಆದರೆ ಅದು ಸುರಕ್ಷಿತವಾಗಿ ಇಳಿಯುತೆಂದು ವಿಮಾನ ಸಂಸ್ಥೆಯ ಹೇಳಿಕೆ ತಿಳಿಸಿದೆ.ಅಮೃತ ಆಸ್ಪತ್ರೆಯ ವೈದ್ಯ ರಾಹುಲ್ ತಂಬಿ ವಿಮಾನದೊಳಗೆ ಹೋಗಿ 23 ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನಡೆಸಿದರು.ಬಾರ್ಬಡೋಸ್ನ ಫ್ಲಾವಿಯಾ ಮೊರೇಲಾ ಎಂಬವರಿಗೆ ಭುಜದಲ್ಲಿ ಗಾಯವಾಗಿದ್ದು ಎಕ್ಸ್ರೇ ತೆಗೆಸುವಂತೆ ಸಲಹೆ ನೀಡಲಾಗಿದೆ. ಆಕೆಯ ಮಿತ್ರ ಲಾರಿವಲ್ ಆಗಸ್ಟೊ ಡಿ.ಒ. ಸಾಂಟೋಸ್ ಎಂಬವರಿಗೆ ಕುತ್ತಿಗೆ ಹಾಗೂ ಭುಜಕ್ಕೆ ಗಾಯಗಳಾಗಿವೆ.
ಅವರಿಗೆ ಡಾ. ನಾಯರ್ ಚಿಕಿತ್ಸೆ ನೀಡಿದರು.ಅವರಿಬ್ಬರೂ ಪ್ರಥಮ ಚಿಕಿತ್ಸೆಯ ಬಳಿಕ ಕೊಯಂಬತ್ತೂರಿಗೆ ಪ್ರಯಾಣಿಸಿದರು.ಎಲ್ಸಿ ಆ್ಯಂಟನಿ ಎಂಬವರಿಗೆ ಹುಬ್ಬಿನ ಬಳಿ ಆದ ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಟೀನಾ ಶಿಲಬಿ ಎಂಬಾಕೆಗೆ ತಲೆಗೆ ಗಾಯವಾಗಿದೆ.ಮೇರಿ ಎಂಬ 29ರ ಹರೆಯದ ಗರ್ಭೀಣಿ ಮಹಿಳೆ ನಿತ್ರಾಣವನ್ನು ಅನುಭವಿಸಿದ್ದಾರೆ. ಹೆಚ್ಚಿನ ಗಾಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ನಾಯರ್ ತಿಳಿಸಿದ್ದಾರೆ.ತನ್ನ ಕುಟುಂಬದೊಂದಿಗೆ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬ ‘‘ಆಮ್ಲಜನಕದ ಮಾಸ್ಕ್ ಜಾರಿ ಬಿತ್ತು. ನಮಗೆ ಬಹಳ ಭಯವಾಯಿತು.
ಇದು ನಮಗೆ ಪುನರ್ಜನ್ಮವಾಗಿದೆ. ಅನೇಕರು ಆಸನಗಳಿಂದ ಕೆಳಗೆ ಬಿದ್ದರು’’ ಎಂದು ತನ್ನ ಅನುಭವ ವಿವರಿಸಿದ್ದಾರೆ.ವಿಮಾನದ ಮರು ಪ್ರಯಾಣ ರದ್ದುಪಡಿಸಲಾಗಿದ್ದು, ಟಿಕೆಟ್ ಪಡೆದಿದ್ದವರನ್ನು ಬೇರೆ ವಿಮಾನದಲ್ಲಿ ಕಳುಹಿಸಲಾಯಿತು.