ಉಡುಪಿ, ಜ.24: ಮುಸ್ಲಿಮ್ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿ ಗಳಿಗೆ ತಾಂತ್ರಿಕ ಶಿಕ್ಷಣ ನೀಡಬೇಕಾಗಿದೆ. ಇದರಿಂದ ಅರು ಆರ್ಥಿಕವಾಗಿ ಸದೃಢರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳ ಬಹುದಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಖುಸ್ರೋ ಖುರೇಷಿ ಹೇಳಿದ್ದಾರೆ.
ಉಡುಪಿ ಜಾಮೀಯ ಮಸೀದಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಅವರು ರವಿವಾರ ಮಾತನಾಡುತಿದ್ದರು. ಕಾನೂನು ಪಾಲಿಸಿ, ದೇಶಪ್ರೇಮವನ್ನು ಬೆಳೆಸಿಕೊಂಡು ಸೌಹಾರ್ದಯುತವಾಗಿ ಬಾಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಯುವಕರು ದೇಶ ಕಟ್ಟುವ ಕೆಲಸ ಮಾಡಬೇಕೆಂದು ತಿಳಿಸಿದರು.
ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಯ ಶಿಲಾನ್ಯಾಸವನ್ನು ದುಬೈ ಹಿದಾಯತ್ ಗ್ರೂಪ್ ಆಫ್ ಕಂಪೆನೀಸ್‌ನ ಮಾಲಕ ಅಲ್‌ಹಾಜ್ ಹಿದಾಯತುಲ್ಲಾ ಅಬ್ಬಾಸ್ ಸಾಹೇಬ್ ಉಚ್ಚಿಲ ಹಾಗೂ ಇಮ್ರಾನ್ ಹಿದಾಯತುಲ್ಲಾ ನೆರವೇರಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಶಾಸಕ ಮೀರ್ ಅಝೀಝ್ ಅಹ್ಮದ್, ಉದ್ಯಾವರ ಹಲಿಮಾ ಸಾಬ್ಜು ಆಡಿಟೋರಿಯಂನ ಆಡಳಿತ ನಿರ್ದೇಶಕ ಅಲ್‌ಹಾಜ್ ಅಬ್ದುಲ್ ಜಲೀಲ್ ಸಾಹೇಬ್, ಮಲ್ಪೆ ಉದ್ಯಮಿ ಪ್ರಮೋದ್ ಮಧ್ವರಾಜ್, ಬೆಂಗಳೂರು ಕನ್ಸಲ್ಟಿಂಗ್ ಎಂಜಿನಿಯರ್ ಸಜ್ಜಾದ್ ಅಲಿಖಾನ್ ಭಾಗವಹಿಸಿದ್ದರು.
ಮಸೀದಿಯ ಮೌಲಾನ ಅಬ್ದುಲ್ ರಹಿಮಾನ್ ಖಾನ್ ಶಿರಾನಿ ದುವಾ ನೆರವೇರಿಸಿದರು. ಇಫ್ತಿಕಾರ್ ಅಹ್ಮದ್, ಹಾಜಿ ಅಬ್ದುಲ್ಲ ಪರ್ಕಳ, ಜಯಕರ ಶೆಟ್ಟಿ ಇಂದ್ರಾಳಿ, ಆತೀಫ್ ಹುಸೈನ್, ಮಸೀದಿ ಪುನರ್‌ನಿರ್ಮಾಣ ಸಮಿತಿಯ ಸಂಚಾಲಕ ಕೆ.ಎಂ.ಸಲೀಂ ಉಪಸ್ಥಿತರಿದ್ದರು.
ಮಸೀದಿಯ ಅಧ್ಯಕ್ಷ ಅಲ್‌ಹಾಜ್ ಟಿ.ಎಸ್.ಬುಡನ್ ಬಾಷಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಖಮ್ರುದ್ದೀನ್ ಎಂ. ವಂದಿಸಿದರು. ಉಸ್ಮಾನ್ ಅಲಿ ಕಾರ್ಯಕ್ರಮ ನಿರೂಪಿಸಿದರು.