
ಕುಷ್ಟಗಿ ತಾಲ್ಲೂಕು ದೊಣ್ಣೆಗುಡ್ಡ ಗ್ರಾಮದಲ್ಲಿ ಭಾನುವಾರ ನಡೆದ ಜಾತ್ರೆ ಸಂದರ್ಭದಲ್ಲಿ ದೇವಿಗೆ ಬಲಿ ಕೊಟ್ಟ ಕೋಣ, ಟಗರುಗಳ ರುಂಡಗಳು.
ಪ್ರಾಣಿ ಬಲಿಗೆ ಕುಖ್ಯಾತಿ ಹೊಂದಿ ರುವ ಕೊಪ್ಪಳ ಜಿಲ್ಲೆಯ ಈ ತಾಲ್ಲೂಕಿನ ದೊಣ್ಣೆಗುಡ್ಡ ದುರುಗಮ್ಮ ದೇವಿ ಜಾತ್ರೆಯಲ್ಲಿ ಸಹಸ್ರ ಸಂಖ್ಯೆ ಕೋಣ ಕುರಿಗಳನ್ನು ಬಲಿ ನೀಡುವ ಮೂಲಕ ಭಕ್ತರು ದೇವಿಗೆ ರಕ್ತ ತರ್ಪಣ ನೀಡಿದರು.
ಕುಷ್ಟಗಿ: ಪ್ರಾಣಿ ಬಲಿಗೆ ಕುಖ್ಯಾತಿ ಹೊಂದಿ ರುವ ಕೊಪ್ಪಳ ಜಿಲ್ಲೆಯ ಈ ತಾಲ್ಲೂಕಿನ ದೊಣ್ಣೆಗುಡ್ಡ ದುರುಗಮ್ಮ ದೇವಿ ಜಾತ್ರೆಯಲ್ಲಿ ಸಹಸ್ರ ಸಂಖ್ಯೆ ಕೋಣ ಕುರಿಗಳನ್ನು ಬಲಿ ನೀಡುವ ಮೂಲಕ ಭಕ್ತರು ದೇವಿಗೆ ರಕ್ತ ತರ್ಪಣ ನೀಡಿದರು.
ಬಲಿ ನೀಡುವುದನ್ನು ತಡೆಹಿಡಿ ಯಲು ಪ್ರಯತ್ನಗಳನ್ನು ಮಾಡಿರುವು ದಾಗಿ ಜಿಲ್ಲಾಡಳಿತ ಹೇಳಿದ್ದರೂ ಅದೆಲ್ಲ ನೆತ್ತರಹೊಳೆಯಲ್ಲಿ ಕೊಚ್ಚಿಹೋಗಿ ಅಂಧಶ್ರದ್ಧೆ ವಿಜೃಂಭಿಸಿತು.
ಪೊಲೀಸರ ಕಣ್ತಪ್ಪಿಸಿ ದೇವಸ್ಥಾನ ಸಮಿತಿಯವರು ಪಟ್ಟದ ಕೋಣವನ್ನು ಗೌಪ್ಯವಾಗಿ ಬಲಿ ನೀಡಿದರು. ಹರಕೆ ಹೊತ್ತ ಭಕ್ತರು ನೀಡಿದ ಕೋಣ ಮತ್ತು ಟಗರುಗಳಿಗೆ ಲೆಕ್ಕವೇ ಇರ ಲಿಲ್ಲ. ದೇವಸ್ಥಾನದ ಅಕ್ಕಪಕ್ಕದಲ್ಲೇ ಕೋಣ ಟಗರುಗಳನ್ನು ಕಡಿಯುತ್ತಿದ್ದ ದೃಶ್ಯ ಕಂಡುಬಂದಿತು. ಸಾವಿರ ಕೋಣ ಗಳು ಮತ್ತು ಆರೇಳು ಸಾವಿರ ಟಗರು ಗಳ ಪ್ರಾಣಾಹುತಿ ನೀಡಲಾಗಿದೆ.
ದೇವಿ ಗುಡಿಯ ಸಮೀಪ ತೋಡ ಲಾ ಗಿದ್ದ ಬೃಹತ್ ಹೊಂಡದಲ್ಲಿ ಜಾತ್ರೆ ಯಲ್ಲಿ ಕಡಿದ ಪ್ರಾಣಿಗಳ ರುಂಡಗಳನ್ನು ಮುಚ್ಚಲಾಯಿತು. ಬಲಿ ನೀಡುವುದಕ್ಕೆ ಯಾವುದೇ ನಿರ್ಬಂಧ ಇಲ್ಲದ ಕಾರಣ ಅಂಜಿಕೆ ಅಳುಕು ಇಲ್ಲದೆ ಭಕ್ತರು ರುಂಡಗಳನ್ನು ಚೆಂಡಾಡಿ ದೇವಿಗೆ ಬಲಿ ನೀಡಿ ಕೃತಾರ್ಥರಾದರು.
ಕಳೆದ ಎರಡು ವರ್ಷದ ಹಿಂದಿನ ಜಾತ್ರೆಯ ಸಂದರ್ಭದಲ್ಲಿ ಪ್ರಾಣಿ ದಯಾ ಸಂಘದವರ ಒತ್ತಡದಿಂದ ದೇವಿ ಹೆಸರಿನಲ್ಲಿ ಪ್ರಾಣಿ ಬಲಿ ಪದ್ಧತಿ ತಡೆಗೆ ಜಿಲ್ಲಾಡಳಿತ ಸಾಕಷ್ಟು ಬಿಗಿ ಕ್ರಮಗಳನ್ನು ಅನುಸರಿಸಲಾಗಿತ್ತು. ಈ ಬಾರಿ ಅಂಥ ಯಾವುದೇ ವ್ಯವಸ್ಥೆ ಕಂಡುಬರಲಿಲ್ಲ. ಜನ ಎಲ್ಲೆಂದರಲ್ಲಿ ಪ್ರಾಣಿಗಳನ್ನು ಕಡಿಯುತ್ತಿದ್ದರು.
ಕಂದಾಯ, ಪೊಲೀಸ್ ಇಲಾಖೆಯ ವರ ಕೆಲಸ ದೇವಸ್ಥಾನದ ಪ್ರಾಂಗಣಕ್ಕೆ ಮಾತ್ರ ಸೀಮಿತವಾಗಿತ್ತು. ಅಲ್ಲದೇ ಭಕ್ತರನ್ನು ಎದುರು ಹಾಕಿಕೊಳ್ಳುವಲ್ಲಿ ಅವರೂ ಅಸಹಾಯಕರಾಗಿದ್ದು ವ್ಯಕ್ತ ವಾ ಯಿತು. ಬಲಿಯಾದ ಪ್ರಾಣಿಗಳ ತಲೆಗಳಿಗೆ ಮತ್ತು ಅಂಗಡಿ ಮುಂಗಟ್ಟು ಗಳಿಗೆ ಶುಲ್ಕ ನಿಗದಿ ಪಡಿಸಲಾಗುತ್ತಿದ್ದು ಲಕ್ಷಾಂತರ ರೂಪಾಯಿ ಆದಾಯ ಸಂಗ್ರಹವಾಗುತ್ತದೆ.
ಪ್ರಜಾವಾಣಿ ವಾರ್ತೆ