ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಜಿಜಾಪುರ: ಮುಂದುವರೆದ ಧಾರಾಕಾರ ಮಳೆ - ಇನ್ನೂ ಹದಿನೇಳು ಜನರ ಮರಣ

ಜಿಜಾಪುರ: ಮುಂದುವರೆದ ಧಾರಾಕಾರ ಮಳೆ - ಇನ್ನೂ ಹದಿನೇಳು ಜನರ ಮರಣ

Sat, 03 Oct 2009 02:56:00  Office Staff   S.O. News Service
ಬಿಜಾಪುರ, ಅ.೨: ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಜಾಪುರದಲ್ಲಿ ಇಂದು ೧೧ ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ೨೧ಕ್ಕೆರಿದೆ. ಕಿತ್ತೂರು ಚೆನ್ನಮ್ಮ ವೃತ್ತದಲ್ಲಿನ ಉಗ್ರಾಣಗಳಿಗೆ ನುಗ್ಗಿದ ಮಳೆನೀರಿನಿಂದಾಗಿ ಕೊಟ್ಯಂತರ ರೂ.ಗಳ ಸಾಮಗ್ರಿಗಳು ಹಾನಿಗೊಳಗಿವೆ.

ಆಲಮಟ್ಟಿ ಜಲಾಶಯದ 19 ಕ್ರೇಸ್ಟ್ ಗೇಟ್‌ಗಳಿಂದ 2.59 ಲಕ್ಷ ಕ್ಯೂಸೇಕ್ ನೀರು ಕೃಷ್ಣಾ ನದಿಗೆ ಬಿಡುತ್ತಿರುವುದರಿಂದ ೨೦ ಗ್ರಾಮಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತುಂಬಿ ಹರಿದ ತುಂಗಭದ್ರಾ

ಬಳ್ಳಾರಿ: ಮಳೆಯ ಜಲ ತಾಂಡವದಿಂದಾಗಿ ಜಿಲ್ಲೆಯಲ್ಲಿ ತುಂಗಾಭದ್ರಾ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ೧.೩೩ ಲಕ್ಷ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ಹಂಪಿಯ ಪುರಾತನ ಐತಿಹಾಸಿಕ ಸ್ಮಾಕರಗಳು ನೀರಿನಿಂದ ಆವೃತಗೊಂಡಿವೆ.

ಈ ಮಧ್ಯೆ ಹಂಪಿಯಲ್ಲಿ ಲಘುಭೂಕಂಪ ಉಂಟಾಗಿದ್ದು, ಜನತೆ ಯಲ್ಲಿ ಆತಂಕ ಮನೆ ಮಾಡಿದೆ. ಕಂಪ್ಲಿ, ಸಿರುಗುಪ್ಪ ದಿಂದ ಬಳ್ಳಾರಿಯ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ನೆರೆ ಹಾವಳಿಯ ಸಂತ್ರಸ್ತರ ನೆರವಿಗೆ ಸರಕಾರ ೧೦ ತಂಡಗಳನ್ನು ರಚನೆ ಮಾಡಿದ್ದು, ಸಮರೋಪಾಧಿಯಲ್ಲಿ ರಕ್ಷಣೆ ಕಾರ್ಯ ನಡೆಯುತ್ತಿದ್ದು, ಸುಮಾರು ೮೦ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕಾರಿನೊಂದಿಗೆ 5 ಮಂದಿ ನೀರುಪಾಲು

ಕೊಪ್ಪಳ: ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಆರು ಮಂದಿ ಸಾವನ್ನಪ್ಪಿದ್ದು, ಐದು ಮಂದಿ ಇದ್ದ ಕಾರೊಂದು ಹೀರೆಹಳ್ಳಿದ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ.

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನೀರಿನಲ್ಲಿ ಕೊಚ್ಚಿಹೋದ ಕಾರಿನಲ್ಲಿ ವೈದ್ಯ ಶಿವರಾಂ ಎಂಬವರು ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆ. ಹಲವಾರು ಮನೆಗಳು ನೆಲಕಚ್ಚಿವೆ. ಹತ್ತಾರು ಗ್ರಾಮಗಳು ನೀರಿನಿಂದ ಜಲಾವೃತಗೊಂಡಿವೆ. ಜನತೆ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

ಗುಲ್ಬರ್ಗಾ: 50 ಗ್ರಾಮಗಳು ಜಲಾವೃತ

ಗುಲ್ಬರ್ಗಾ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಲ್ಲಿನ ಸುರಪುರ-ಶಹಪುರ ತಾಲೂಕಿನ ೫೦ಕ್ಕೂ ಹೆಚ್ಚು ಗ್ರಾಮಗಳು ಅಕ್ಷರಶಃ ಜಲಾವೃತವಾಗಿವೆ.
ನಾರಾಯಣಪುರ ಜಲಾಶಯ ಹಾಗೂ ಡೋಣಿನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಲ ಪ್ರಳಯ ಉಂಟಾ ಗಿದೆ. ಜಿಲ್ಲೆಯಲ್ಲಿ ೧೭ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಗುಲ್ಬರ್ಗಾ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಸಮಯಕ್ಕೆ ಪರಿಹಾರ ಕೈಗೊಳ್ಳದ ಅಧಿಕಾರಿಯೊಬ್ಬರನ್ನು ಸ್ಥಳದಲ್ಲೆ ಅಮಾನತ್ತು ಮಾಡಿದ್ದಾರೆ.

ದೇವಪುರದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸುರಪುರ-ಶಹಪುರ ತಾಲೂಕಿನ ಹಲವಾರು ಗ್ರಾಮಗಳಿಗೆ ರಸ್ತೆ, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳು ಸಂಪೂರ್ಣ ಕಡಿತಗೊಂಡಿವೆ.

ಬಾಗಲಕೋಟೆ: 6 ಮಂದಿ ಬಲಿ

ಬಾಗಲಕೋಟೆ: ಮಳೆಯ ರುದ್ರ ನರ್ತನಕ್ಕೆ ಇಂದು ಮತ್ತೆ ಆರು ಮಂದಿ ಬಲಿಯಾಗುವುದರ ಮೂಲಕ ಜಿಲ್ಲೆಯಲ್ಲಿ ಸಾನ ಸಂಖ್ಯೆ ೧೫ಕ್ಕೇರಿದೆ. ಬಾದಾಮಿ ತಾಲೂಕಿನ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. 

ಪ್ರವಾಹದಿಂದಾಗಿ ಸಂತ್ರಸ್ತರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಾಗದಿರುವ ಸ್ಥಿತಿಗೆ ಜಿಲ್ಲಾಡಳಿತ ತಲುಪಿದೆ. ಬಿಸುನಾಳ ಕೊಪ್ಪದಲ್ಲಿ ಸಿಲುಕಿದ್ದ ೮೦ ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ೧೧ ಮಂದಿಯನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಯತ್ನಿಸುತ್ತಿದ್ದಾರೆ. ನೀರಿನ ಹರಿವು ಹೆಚ್ಚಾಗಿರುವುದರಿಂದ ಬೋಟ್‌ಗಳನ್ನು ಬಳಸಿ ರಕ್ಷಣಾ ಕಾರ್ಯವನ್ನು ಮುಂದುವರೆಸಲಾಗಿದೆ.

ಅಲ್ಲದೆ, ಸಂತ್ರಸ್ತರಿಗಾಗಿ ಪ್ರವಾಹ ಪೀಡಿತ ಸ್ಥಳಗಳ ವಿವಿದೆಡೆ ೧೪ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

Share: