ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂದಾಪುರ: ’ಹಿಂಸೆಯನ್ನು ಅಹಿಂಸೆಯಿಂದ ಎದುರಿಸಿ’ - ಬೆಳಕಿನ ಶ್ರದ್ದಾಂಜಲಿಯಲ್ಲಿ ಜಯಪ್ರಕಾಶ ಶೆಟ್ಟಿ

ಕುಂದಾಪುರ: ’ಹಿಂಸೆಯನ್ನು ಅಹಿಂಸೆಯಿಂದ ಎದುರಿಸಿ’ - ಬೆಳಕಿನ ಶ್ರದ್ದಾಂಜಲಿಯಲ್ಲಿ ಜಯಪ್ರಕಾಶ ಶೆಟ್ಟಿ

Sun, 21 Feb 2010 17:48:00  Office Staff   S.O. News Service

ಕುಂದಾಪುರ, ಫೆಬ್ರವರಿ ೨೧: ಧರ್ಮ, ದೇಶ-ಭಾಷೆಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಗಾಂಧೀಜಿಯ ಅಹಿಂಸಾ ಮಾರ್ಗವೇ ಏಕೈಕ ಉತ್ತರ ಎಂದು ಚಿಂತಕ, ಉಪನ್ಯಾಸಕ ಜಯಪ್ರಕಾಶ ಶೆಟ್ಟಿ ಹೇಳಿದ್ದಾರೆ. ಶನಿವಾರ ರಾತ್ರಿ ಶಾಸ್ತ್ರೀವೃತ್ತದಲ್ಲಿ ಇಲ್ಲಿನ ’ಸಹಮತ’ ಸಂಘಟನೆ ಆಯೋಜಿಸಿದ್ದ ಪುಣೆ ಬಾಂಬ್ ಸ್ಫೋಟಕ್ಕೆ ಬಲಿಯಾದ ಜೀವಗಳಿಗೆ ’ಬೆಳಕಿನ ಶ್ರದ್ಧಾಂಜಲಿ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಕೋಮು ಹಿಂಸೆಯ ವಿಚ್ಛಿದ್ರಕಾರಿ ಶಕ್ತಿಗಳ ಹಿಂದೆ ಜಾಗತಿಕ ಮಟ್ಟದ ಬಂಡವಾಳಶಾಹಿಗಳ ಕ್ರೂರ ಹಸ್ತ ಇದೆ. ಎಲ್ಲ ಹಿಂಸೆಯ ಎಲ್ಲ ಲಾಭವು ಭೂಮಾಲಕರಿಗೆ, ಬಂಡವಾಳಶಾಹಿಗಳ ಉದ್ಧಾರಕ್ಕಾಗಿ ಎಂಬುದನ್ನು ಎಲ್ಲ ಹಿಂಸಾಚಾರಗಳಲ್ಲಿ ದಾಳವಾಗಿ ಬಳಸಲ್ಪಡುವ ಅಮಾಯಕ ಬಡ ಯುವಕರು ಮನಗಾಣಬೇಕಾಗಿದೆ ಎಂದರು. ತಾಲಿಬಾನ್‌ಗಳು ಬಾಮಿಯಾನ್ ಬುದ್ಧನ ಮೂರ್ತಿಗಳನನು ಧ್ವಂಸಗೊಳಿಸಿದಾಗ ವಿಶ್ವದ ಬೌದ್ಧ ಸಮುದಾಯ ಅಹಿಂಸೆಯಿಂದ ಆ ನೋವನ್ನು ಎದುರಿಸಿತು. ಈ ರೀತಿಯ ಪ್ರತಿಕ್ರಿಯೆಯೇ ಇಂದಿನ ಎಲ್ಲ ಕೋಮುಹಿಂಸೆಗಳನ್ನು ತಡೆಯಬಲ್ಲದು ಎಂದರು.

 

 

ಹಿಂಸೆಗೆ ಕೆಳಜಾತಿಗಳ, ಬಡಯುವಕರು ಆಹಾರವಾಗುತ್ತಿದ್ದಾರೆ. ಈ ಬಡಯುವಕರು ಹಲ್ಲೆ ನಡೆಸುವುದು ಕೂಡ ಬಡವರ್ಗದವರ ಮೇಲೆಯೇ ಆಗಿದೆ. ಈ ಯುವಕರನ್ನು ಕೆಲ ಸಂಘಟನೆಗಳು ಬ್ರೈನ್‌ವಾಷ್ ಮಾಡಿದ್ದಾರೆ. ಕೆಲ ಸಂಘಟನೆಗಳು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಬಡಪೊಲೀಸರ ಮೇಲೆ ದಾಳಿ ಮಾಡಿ ಕೊಲ್ಲುತ್ತಾರೆ ಎಂದು ಅವರು ನಕ್ಸಲ್ ಹಿಂಸಾಚಾರವನ್ನು ಖಂಡಿಸಿದರು.

 

ನ್ಯಾಯವಾದಿ ರತ್ನಾಕರ ಅವರು ಮಾತನಾಡಿ ಕೋಮುವಾದ ಹೆಚ್ಚಿದಂತೆ ಭಯೋತ್ಪಾದನೆಯೂ ಜಾಸ್ತಿಯಾಗುತ್ತದೆ. ಇವೆರಡೂ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು. ಇಂದು ಕೆಲವರು ನಾನು ದೇಶಭಕ್ತ, ನೀನು ದೇಶದ್ರೋಹಿ ಎನ್ನುತ್ತಿದ್ದಾರೆ. ಈ ರೀತಿಯ ಚಿಂತನೆಗಳು ದೇಶವನ್ನು ಒಡೆಯುತ್ತವೆ ಎಂದರು. ಇತ್ತೀಚೆಗೆ ಕೆಲವರು ಮಾತನಾಡಿದರೆ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಾರೆ. ಶಾಂತಿ ಇಲ್ಲದೆಡೆ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.

 

 

 

21-kun4.jpg 

 

ಅಧ್ಯಕ್ಷತೆ ವಹಿಸಿದ್ದ ’ಸಹಮತ’ ಸಂಘಟನೆಯ ಮುಖಂಡ ವಲೇರಿಯನ್ ಮಿನೇಜಸ್ ಮೂರ್ತಿಗಳನ್ನು, ಕಟ್ಟಡಗಳನ್ನು ಧ್ವಂಸ ಮಾಡಿದಾಗ ನಾವು ಸಹನೆ ಕಳೆದುಕೊಂಡು ಹಿಂಸೆಗೆ ಹಿಂಸೆಯಿಂದಲೇ ಉತ್ತರಿಸಲು ಹೊರಡಬಾರದು. ಧರ್ಮ ಶ್ರದ್ಧೆ ಮನದಲ್ಲಿರಬೇಕು, ಕಟ್ಟಡ ಮತ್ತು ಮೂರ್ತಿಗಳಲ್ಲಿ ಅಲ್ಲ ಎಂದರು. ಮಾನವೀಯತೆಯ, ಸಹಬಾಳ್ವೆಯ ಬೆಳಕಿನಲ್ಲಿ ಹಿಂಸೆಯನ್ನು ಎದುರಿಸಬೇಕು ಎಂದರು. ಡಿ.ಎಸ್.ಎಸ್ ಮುಖಂಡ ಗೋಪಾಲಕೃಷ್ಣ ಉಪಸ್ಥಿತರಿದ್ದರು.

 

ಪುಣೆ ಬಾಂಬ್ ಸ್ಫೋಟದಲ್ಲಿ ಬಲಿಯಾದ ಅಮಾಯಕ ಜೀವಗಳಿಗೆ ’ಇತ್‌ನಿ ಶಕ್ತಿ ಹಮೇ ದೇ ನ ದಾತಾ, ಮನ್ ಕಾ ವಿಶ್ವಾಸ್ ಕಮ್‌ಜೋರ್ ಹೋ ನ’ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

 

 

’ಸಹಮತ’ ಸಂಘಟನೆಯ ಮುಖಂಡ ಶಶಿಧರ ಹೆಮ್ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ’ಸಹಮತ’ದ ಮುಖಂಡರಾದ ಶ್ರೀಕಾಂತ ವಡೇರಹೋಬಳಿ ಸ್ವಾಗತಿಸಿ, ವಿನೋದ್ ಕ್ರಾಸ್ತಾ ವಂದಿಸಿದರು.

 

ಜಯಪ್ರಕಾಶ್ ಮಾತಿನ ಮುಖ್ಯಾಂಶಗಳು:

 

ಇಟ್ಟಿಗೆ-ಕಟ್ಟಿಗೆಗಿಂತ ಜೀವ ಪವಿತ್ರ.

ಕರಾವಳಿಯಲ್ಲಿ ಜೀವಕ್ಕೆ ಅತ್ಯಂತ ಕನಿಷ್ಟ ಬೆಲೆ.

ಶ್ರಮಿಕ ವರ್ಗಕ್ಕೆ ಜಾತಿ ಇಲ್ಲ.

ಕಲ್ಲು- ಗುಂಡಿನಿಂದ ಮನುಷ್ಯ ಸಂಬಂಧ ಬೆಳೆಸಲಾಗದು

ಬೆಂಕಿ ಹಚ್ಚಬಾರದು, ಬೆಳಕು ಹಚ್ಚಬೇಕು.

ಆಹಾರ-ಬದುಕಿನ ರೀತಿಯನ್ನು ಕೌರ್ಯದಿಂದ ನಿರ್ದೇಶಿಸುವವರು ಮತ್ತು ಜಾಹೀರಾತುಗಳ ಮೂಲಕ ಮೆಲ್ಲನೆ ಬದುಕಿನೊಳಗೆ ನುಗ್ಗುವವರ ಕೌರ್ಯಗಳೆರಡೂ ಪರಸ್ಪರ ಪೂರಕ ಶಕ್ತಿಗಳು.

 


Share: