ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ವರದಕ್ಷಿಣೆಯಾಸೆಗೆ ಎರೆಡನೇ ಮದುವೆ - ಮಂಟಪದಿಂದ ನೇರ ಸೆರೆಗೆ

ಬಂಟ್ವಾಳ: ವರದಕ್ಷಿಣೆಯಾಸೆಗೆ ಎರೆಡನೇ ಮದುವೆ - ಮಂಟಪದಿಂದ ನೇರ ಸೆರೆಗೆ

Sun, 18 Apr 2010 16:23:00  Office Staff   S.O. News Service

ಬಂಟ್ವಾಳ, ಏಪ್ರಿಲ್: ವರದಕ್ಷಿಣೆ ಆಸೆಯಿಂದ ಎರಡನೇ ಮದುವೆಗೆ ಸಿದ್ದತೆ ನಡೆಸಿದ ವರಮಹಾಶಯನೋರ್ವನನ್ನು ಬಂಟ್ವಾಳ ಪೋಲಿಸರು ಮದುವೆ ಮಂಟಪದಲ್ಲೇ ಬಂಧಿಸಿದ ಘಟನೆ ತಾಲೂಕಿನ ಬಿಸಿರೋಡು ಸಮೀಪ ಭಾನುವಾರ ನಡೆದಿದೆ.

 

ಕಾಸರಗೋಡಿನ ಎಣ್ಮಾಜೆ ನಿವಾಸಿ ಆನಂದ ಪೂಜಾರಿ ಎಂಬವರ ಮಗ ಸುರೇಶ್ ಎಂಬಾತನೇ ಈ ಎಡವಟ್ಟು ಮಾಡಿಕೊಂಡು ಸಿಕ್ಕಿಬಿದ್ದ ವರಮಹಾಶಯ. ಆರೋಪಿ ಸುರೇಶ್ ಗೆ ಈ ಹಿಂದೆ ಮದುವೆಯಾಗಿದ್ದು ನಾಲ್ಕು ವರ್ಷದ ಮಗುವೂ ಇದೆ. ಆದರೂ ಇಂದು ಬಿಸಿರೋಡು ಸಮೀಪದ ಕಲ್ಯಾಣ ಮಂಟಪದಲ್ಲಿ ಮರು ಮದುವೆಗೆ ಸಿದ್ದತೆ ನಡೆಸುತ್ತಿರುವಾಗಲೇ ಪತ್ನಿ ನೀಡಿದ ದೂರಿನಂತೆ ಬಂಟ್ವಾಳ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಘಟನೆ ವಿವರ: ಇಂದು ಬಿಸಿರೋಡು ಸಮೀಪದ ಕಲ್ಯಾಣ ಮಂಟಪವೊಂದರಲ್ಲಿ ಕಾಸರಗೋಡು ನಿವಾಸಿ ಸುರೇಶ್ ಹಾಗೂ ಪೊಳಲಿ ಸಮೀಪ ನಿವಾಸಿ ಯುವತಿಗೂ ವಿವಾಹ ನಡೆಯುವುದರಲ್ಲಿತ್ತು. ಅದಕ್ಕಾಗಿ ಸಕಲ ಸಿದ್ದತೆಯೂ ನಡೆದಿತ್ತು. ಇತ್ತ ವರ ಮಂಟಪ ಏರಿದ್ದೇ ತಡ ಸ್ಥಳದಲ್ಲಿ ಪ್ರತ್ಯಕ್ಷರಾದ ಬಂಟ್ವಾಳ ನಗರ ಪೋಲಿಸರು ವರನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ತಾನು ಅವಿವಾಹಿತ ಎಂದು ಹೆಣ್ಣಿನಮನೆಯವರನ್ನು ನಂಬಿಸಿದ್ದ ಆರೋಪಿ ಸುರೇಶ್ ಅವರ ಕಡೆಯಿಂದ ೨೦ ಸಾವಿರ ವರದಕ್ಷಿಣೆಯನ್ನೂ ಪಡೆದಿದ್ದ. ಇಂದು ಬೆಳಿಗ್ಗೆ ನಗರ ಠಾಣೆಗೆ ಬಂದು ದೂರು ನೀಡಿದ ಸುರೇಶ್ ನ ಪತ್ನಿ ಲತಾ, ತನ್ನ ಪತಿ ಎರಡನೇ ವಿವಾಹವಾಗುತ್ತಿದ್ದಾರೆ , ಇದನ್ನು ನಿಲ್ಲಿಸಿ ಎಂದು ಮೊರೆಯಿಟ್ಟರು. ತಕ್ಷಣ ಕಾರ್ಯ ಪ್ರವೃತ್ತರಾದ ಪೋಲಿಸರು ಆರೋಪಿಯನ್ನು ಬಂಧಿಸಿ ಕಾಸರಗೋಡು ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.

 

 

ವರದಕ್ಷಿಣೆ ವಾಪಾಸ್....

 

ಪತ್ನಿಯ ಸಮಯಪ್ರಜ್ಞೆಯಿಂದಾಗಿ, ಮತ್ತೊಂದು ಹೆಣ್ಣಿನ ಬಾಳೂ ಹಾಳಾಗುವುದು ತಪ್ಪಿದೆ. ಮರುಮದುವೆ ಗೆಂದು ಹೆಣ್ಣಿನ ಕಡೆಯವರಿಂದ ವರದಕ್ಷಿಣೆ ರೂಪದಲ್ಲಿ ಪಡೆದಿದ್ದ೨೦ ಸಾವಿರ ರೂ ನಗದನ್ನು ಪೋಲಿಸರು ಹೆಣ್ಣಿನ ಕಡೆಯವರಿಗೆ ಮರಳಿಸಿದ್ದಾರೆ.

 

ಹಾಗೂ ಇಂದಿನ ಮದುವೆಗೆ ಅಡುಗೆ ವ್ಯವಸ್ಥೆ ಮಾಡಲಾಗಿದ್ದ ಖರ್ಚನ್ನು ಪೋಲಿಸರು ಆತನಿಂದಲೇ ಭರಿಸಿದ್ದಾರೆ.

 

 

ಆರೋಪಿ ಸುರೇಶ್ ನ ಪತ್ನಿ ತನ್ನ ಪತಿಯ ವಂಚನೆಯ ಬಗ್ಗೆ ಆರಂಭದಲ್ಲಿ ಕಾಸರಗೋಡು ಪೋಲಿಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೋಲಿಸರು ತನಿಖೆ ಮುಂದುವರಿಸಿದ್ದಾರೆ.


Share: