ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೆರೆ ಪ್ರದೇಶದಲ್ಲಿ ಒತ್ತುವರಿ ಆಗದಂತೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ.

ಕೆರೆ ಪ್ರದೇಶದಲ್ಲಿ ಒತ್ತುವರಿ ಆಗದಂತೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ.

Tue, 04 Jul 2023 04:09:42  Office Staff   SO News

ಕಾರವಾರ :  ಕೆರೆಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ  ಹೆಚ್ಚಿನ ಒತ್ತು  ನೀಡಬೇಕು. ಕೆರೆಗಳ ಸಮೀಕ್ಷೆ ಮತ್ತು  ಕೆರೆ ಪ್ರದೇಶದಲ್ಲಿ ಯಾವುದೇ ರೀತಿಯ ಒತ್ತುವರಿಗಳು ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚಿಸಿದ್ದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ  ಕಾರ್ಯನಿರ್ವಹಣಾ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.

ಬಳಿಕ  ಹಳಿಯಾಳ ಸಣ್ಣ ನೀರಾವರಿ ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ಅವಿನಾಶ ಆಲೂರ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ,  ಜಿಲ್ಲೆಯಲ್ಲಿ 11 ತಾಲೂಕುಗಳಿಂದ ಒಟ್ಟು 2118 ಕೆರೆಗಳಿದ್ದು, ಅದರಲ್ಲಿ   ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ್  ಮತ್ತು ಹೊನ್ನಾವರ ತಾಲೂಕುಗಳಲ್ಲಿ ಕೆರೆಗಳ ಸಮೀಕ್ಷೆ ಪೂರ್ಣಗೊಂಡಿದ್ದು  ಉಳಿದ ಹಳಿಯಾಳ, ಜೋಯಿಡಾ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕುಗಳಲ್ಲಿ ಕೆರೆಗಳ ಸಮೀಕ್ಷೆ ಮತ್ತು ಅಳತೆ ಮಾಡುವುದು ಬಾಕಿ ಇದ್ದು ಕೊಡಲೇ ಅವುಗಳನ್ನು ಅಳತೆ ಮಾಡಿ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ  ಅನುಕೂಲ ಮಾಡಿ ಕೊಡುವುದಾಗಿ ತಿಳಿಸಿದರು.

ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು  ತಾಲೂಕಿನ  ಎಲ್ಲ ತಹಶೀಲ್ದಾರಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಸರ್ಕಾರಿ ಕೆರೆಗಳ ಗಡಿಗಳನ್ನು ಗುರುತಿಸುವ ಕಾರ್ಯಮಾಡಬೇಕು ಹಾಗೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಗುರುತಿಸಿ ಸರ್ವೆ ಸೇರಿದಂತೆ ಕೆರೆಗಳ ಸಂರಕ್ಷಣಾ ಕಾರ್ಯವು ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಇದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಾಹಿಸಬೇಕು  ಎಂದರು. ನ್ಯಾಯಾಲಯ ಪ್ರಕರಣಗಳಲ್ಲಿ ಇದ್ದಂತಹ ಕೆರೆಗಳನ್ನು  ನ್ಯಾಯಾಲಯದ ಸೂಚನೆಯಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ರಾಜು ಮೊಗವೀರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ರೇಣುಕಾ.ಡಿ. ರಾಯ್ಕರ್, ಉಪವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ ಹಾಗೂ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Share: