ಬೆಂಗಳೂರು,ಜ 8:ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಸರ್ಕಾರ ಅಖಾಡ ಸಜ್ಜುಗೊಳಿಸುತ್ತಿದ್ದು, ಬಹುತೇಕ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಚುನಾವಣೆಗೆ ಮೀಸಲಾತಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮೀಸಲಾತಿ ಪಟ್ಟಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ಆಯೋಗ ವೇಳಾ ಪಟ್ಟಿ ಪ್ರಕಟಿಸಲಿದೆ.
ರೋಸ್ಟರ್ ಪದ್ಧತಿಯಂತೆ ಮೀಸಲಾತಿ ನಿಗದಿಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದು, ಅದರಂತೆ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಕಳೆದ ೨೦೦೫ ರಲ್ಲಿ ನಡೆದ ಚುನಾವಣೆಯಲ್ಲಿ ನಿಗದಿಪಡಿಸಿದ ಮೀಸಲಾತಿಯಲ್ಲಿ ಪುನರಾವರ್ತನೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕೆಂದು ಸರ್ಕಾರ ಸೂಚನೆ ನೀಡಿದ್ದು, ಕೆಲ ಜಿಲ್ಲೆಗಳಲ್ಲಿ ಮೀಸಲಾತಿ ನಿಗದಿ ಕಾರ್ಯ ಮುಕ್ತಾಯವಾಗಿದೆ.
ಗ್ರಾಮಪಂಚಾಯತ್‌ಗಳ ಅಧಿಕಾರಾವಧಿ ಮಾರ್ಚ್‌ನಿಂದ ಮುಕ್ತಾಯವಾಗುತ್ತಿದೆ. ಇನ್ನೂ ಕೆಲ ಪಂಚಾಯತ್‌ಗಳ ಅವಧಿ ಮೇ ವರೆಗೆ ಇದೆ. ಆದರೆ ಸರ್ಕಾರ ಏಪ್ರಿಲ್ ಕೊನೆಯ ವಾರದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.
ಗ್ರಾಮ ಪಂಚಾಯತ್ ಚುನಾವಣೆಗೆ ಹೊಸ ಮತದಾರರ ಪಟ್ಟಿಯನ್ನು ಅಡಕಗೊಳಿಸುತ್ತಿದ್ದು, ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವ ಹೆಸರುಗಳನ್ನು ಸೇರ್ಪಡೆ ಮಾಡಲು ಚುನಾವಣಾ ಆಯೋಗ ಮುಂದಾಗಿದ್ದು, ಬಹುತೇಕ ಮಾರ್ಚ್ ಅಂತ್ಯ ಇಲ್ಲವೆ ಏಪ್ರಿಲ್ ಆದಿ ಭಾಗದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಇದೇ ಮೂಲಗಳು ತಿಳಿಸಿವೆ.