ಬಳ್ಳಾರಿ, ಅಕ್ಟೋಬರ್ 29: ‘ವಯಸ್ಸಾದರೂ ಅವರು ಇನ್ನೂ ಹಳೆಯ ಚಟ ಬಿಡುತ್ತಿಲ್ಲ. ಅವರ ಸುತ್ತ ಬೆಂಗಳೂರಿನಲ್ಲಿ ಉಗ್ರಗಾಮಿಗಳಿದ್ದಾರೆ. ಅಭಿವೃದ್ಧಿಗಾಗಿ ಪಣ ತೊಟ್ಟಿರುವ ನಮ್ಮ ವಿರುದ್ಧ ನೀಚ ಬುದ್ಧಿ ಪ್ರದರ್ಶಿಸುತ್ತಾರೆ. ಬೆಂಗಳೂರಿನಲ್ಲಿ ಕುಳಿತು ತಾವೇ ಹುಲಿ ಎಂದು ಭಾವಿಸಿದ್ದಾರೆ, ಆದರೆ ಅವರು ನರಿ. ನಿಜವಾದ ಹುಲಿ ಇಲ್ಲೇ ಬಳ್ಳಾರಿಯಲ್ಲಿದೆ.’
ಅಸಮಾಧಾನದ ಜ್ವಾಲಾಮುಖಿ ಹೇಗೆ ಸ್ಫೋಟಗೊಳ್ಳುತ್ತದೆ ಎಂಬುದಕ್ಕೆ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಈ ಮಾತುಗಳೇ ಉದಾಹರಣೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬುಧವಾರ ಸಿರಗುಪ್ಪ ತಾಲೂಕಿನ ಚೆಳ್ಳ ಕೂಡ್ಲೂರು ಗ್ರಾಮದಲ್ಲಿ ‘ಗ್ರಾಮಗಳ ಸ್ಥಳಾಂತರ- ನವಗ್ರಾಮಗಳ ನಿರ್ಮಾಣ’ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರೆಡ್ಡಿ ಮಾತನಾಡಿದರು. ಚುನಾವಣಾ ಪ್ರಚಾರದ ಭಾಷಣಕ್ಕಿಂತಲೂ ಮಿಗಿಲಾದ ಜನಾರ್ದನ ರೆಡ್ಡಿ ಅವರ ಭಾಷಣ ತಾವು ಸಚಿವರಾಗಿರುವ ಸಚಿವ ಸಂಪುಟದ ಮುಖ್ಯಸ್ಥರ ಮೇಲೆಯೇ ಇತ್ತು. ಜನಾರ್ದನ ರೆಡ್ಡಿ ಭಾಷಣದ ತುಣುಕುಗಳು ಹೀಗಿವೆ:
ನೆರೆ ಸಂತ್ರಸ್ತರಿಗೆ ಸೂರು ಒದಗಿಸಲು ಇಂದು ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಇಡೀ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಲು ಎಲ್ಲ ರೀತಿಯಲ್ಲಿಯೂ ಸಜ್ಜಾಗಿರುವಾಗ ಇದಕ್ಕೆ ಅಡ್ಡಗಾಲು ಹಾಕಿ ನೀಚ ರಾಜಕೀಯ ನಡೆಸುತ್ತಿದ್ದಾರೆ.
ಬಡ ಕುಟುಂಬದಿಂದ ಬಂದ ನಾವು ದೇವರ ದಯೆ ಹಾಗೂ ಜನರ ಆಶೀರ್ವಾದದಿಂದ ಅಭಿವೃದ್ಧಿಯ ಮೆಟ್ಟಿಲೇರಿದ್ದೇವೆ. ಸಾಕಷ್ಟು ಹಣ ನಮ್ಮಲ್ಲಿದೆ. ಅಧಿಕಾರ ಇದ್ದರೂ ಸೈ, ಬಿಟ್ಟರೂ ಸೈ.. ಜನಪರ ಕಾಳಜಿ ವಿಷಯಗಳಲ್ಲಿ ಎಂದಿಗೂ ಹಿಂಜರಿಯುವುದಿಲ್ಲ. ಕೆಲವು ಪಿಶಾಚಿಗಳಿಗೆ ಅಧಿಕಾರದ ದಾಹ ಇದೆ. ನಮಗೆ ಹಾಗಿಲ್ಲ.
ಅವರು (ಮುಖ್ಯಮಂತ್ರಿ) ಉಗ್ರಗಾಮಿಗಳ ಬಗ್ಗೆ ಎಲ್ಲರೂ ಚಿಂತಿಸಬೇಕಾಗಿದೆ ಎನ್ನುತ್ತಾರೆ. ಬೆಂಗಳೂರಿನಲ್ಲಿ ಅವರ ಹಿಂದೆಯೇ ಉಗ್ರಗಾಮಿಗಳಿದ್ದಾರೆ. ನಾಡಿನ ಹಿರಿಯ ರಾಜಕೀಯ ಪ್ರಮುಖರು ನೀಡಿರುವ ಈ ಹೇಳಿಕೆ ದುರದೃಷ್ಟಕರ.
ಅವರು ವಯಸ್ಸಾದರೂ ಚಟ ಬಿಡುತ್ತಿಲ್ಲ, ಅಭಿವೃದ್ಧಿಗಾಗಿ ಪಣ ತೊಟ್ಟಿರುವ ನಮ್ಮ ವಿರುದ್ಧ ನೀಚ ಬುದ್ಧಿ ಪ್ರದರ್ಶಿಸುತ್ತಿದ್ದಾರೆ.
ಅವರು ಬೆಂಗಳೂರಿನಲ್ಲಿ ಭಿಕ್ಷೆ ಎತ್ತಿ ೮೦೦ ಕೋಟಿ ಸಂಗ್ರಹವಾಯಿತು ಎನ್ನುತ್ತಾರೆ. ನಿಜವಾಗಿ ಸಂಗ್ರಹವಾಗಿದ್ದು ೪೦-೫೦ ಕೋಟಿ ರು. ಮಾತ್ರ. ನೆರೆ ಸಂತ್ರಸ್ತರಿಗೆ ನೆರವಾಗಲು ಗಣಿ ಮಾಲೀಕರೆಲ್ಲ ಒಟ್ಟಾಗಿ ನಾವೇ ಇಲ್ಲಿ ೫೦೦ ಕೋಟಿ ಸಂಗ್ರಹಿಸಿದ್ದೇವೆ.
ಎಷ್ಟೇ ಹಣ ಖರ್ಚಾದರೂ ಸರಿ, ಬಳ್ಳಾರಿ, ಗದಗ, ಕೊಪ್ಪಳ, ರಾಯಚೂರು, ಬಿಜಾಪುರ, ಬಾಗಲಕೋಟೆ ಮುಂತಾದ ನೆರೆಪೀಡಿತ ಪ್ರದೇಶಗಳಲ್ಲಿನ ಎಲ್ಲಾ ಸಂತ್ರಸ್ತರಿಗೆ ಸೂರು ಒದಗಿಸುತ್ತೇವೆಂದು ತಂದೆ, ತಾಯಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ.
ಇವೆಲ್ಲ ಸರಿಯಾಗಿ ನಡೆದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬ ಆತಂಕದಲ್ಲಿ, ಬೆಂಗಳೂರಿನಲ್ಲಿ ಕುಳಿತ ಮಹಾಶಯರು ಅಡ್ಡಗಾಲು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಬೆಳೆಯುತ್ತಿರುವ ನಮ್ಮ (ಬಳ್ಳಾರಿ ಸಚಿವತ್ರಯರು) ಜನಪ್ರಿಯತೆ ಮತ್ತೆಲ್ಲಿ ಹೆಚ್ಚಾಗುತ್ತದೋ ಎಂಬ ಕಾರಣಕ್ಕಾಗಿ ಇಂತಹ ನೀಚ ಕಾರ್ಯಕ್ಕೆ ಕೈಹಾಕುತ್ತಿದ್ದಾರೆ.
ಟೀವಿ ಪೇಪರ್ಗಳಲ್ಲಿ ಫೋಸ್ ಕೊಡೋದಕ್ಕಾಗಿ ಹೇಳಿಕೆಗಳನ್ನು ನೀಡೋ ಬದ್ಲು, ಜನರೆದುರು ಸರಿಯಾದ ಲೆಕ್ಕಾಚಾರ ಹೇಳಬೇಕು.
ನವೆಂಬರ್ ೧, ೨ರಂದೇ ಈ ಕಾರ್ಯಕ್ರಮ ಮಾಡಬೇಕಾಗಿಲ್ಲ. ಇಂದು ಬುಧವಾರ, ದಶಮಿ. ಭೂಮಿಗೆ ಫಲವತ್ತತೆ ಬರುವ ದಿನ. ಈ ದಿನ ಬಡವರಿಗೆ ಮನೆಕಟ್ಟುವ ಕೆಲಸ ಆರಂಭಿಸಿದರೆ ಅವರ ಜೀವನ ಸಮೃದ್ಧವಾಗುತ್ತದೆ. ಅವರ ಮಕ್ಕಳಿಗೆ ಒಳ್ಳೆಯದಾಗುತ್ತದೆ. ಅವರಿಗೂ ನಮ್ಮಂತಹ ಮಕ್ಕಳು ಹುಟ್ಟಲಿ.
ಗೋವಿಂದಾ...ಗೋವಿಂದಾ: ಒಳಿತನ್ನೇ ಬಯಸಿದ ಕುಟುಂಬದಲ್ಲಿ ಜನಿಸಿದ ನಮ್ಮ ಹಣೆಬರಹದಲ್ಲಿ ಜನ ಬೆಂಬಲದ ಜೊತೆಗೆ, ಕೆಟ್ಟವರ ಕಾಟ ಇದೆಯೆಂದು ಬ್ರಹ್ಮ ಬರೆದಿರಬಹುದು. ಒಳ್ಳೆಯವರಿಗೆ ಒಳ್ಳೇದಾಗಲಿ ವೆಂಕಟರಮಣ ಗೋವಿಂದಾ.. ಕೆಟ್ಟವರಿಗೆ ಕೆಟ್ಟದ್ದಾಗಲಿ ವೆಂಕಟರಮಣ ಗೋವಿಂದಾ....
ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗಿ ನಾಶವಾಗಿರುವ ಮನೆಗಳು ೫೦ ಸಾವಿರ ಮಾತ್ರ. ಆದರೆ ಕೆಲವರು ೧-೨ ಲಕ್ಷ ಮನೆ ಕಟ್ಟಿ ಕೊಡುತ್ತೇವೆ ಎನ್ನುತ್ತಿದ್ದಾರೆ.
ಪ್ರವಾಹಕ್ಕೆ ಸಿಲುಕಿದ ೧೦೯ ಜನರನ್ನು ಮೇಲಕ್ಕೆ ಎತ್ತಿದ ಡಿಸಿ ಮತ್ತು ಎಸ್ ಪಿಯವರನ್ನು ಅವರು (ಮುಖ್ಯಮಂತ್ರಿ) ವರ್ಗಾವಣೆ ಮಾಡಿದ್ದಾರೆ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನೂ ವರ್ಗಾವಣೆ ಮಾಡಿದ್ದಾರೆ. ಇದು ದಲಿತರ ಮೇಲಿನ ದೌರ್ಜನ್ಯ ಎಂದು ನಾವು ಹೇಳಿದರೆ ತಪ್ಪಾಗುತ್ತದೆ.
ನಾವು ಸಾಮೂಹಿಕ ವಿವಾಹ ಮಾಡಿಸುತ್ತೇವೆ. ಆ ತಾಯಿಯ (ಸುಷ್ಮಾ ಸ್ವರಾಜ್) ಸಂತೋಷಕ್ಕಾಗಿ ಹತ್ತು ವರ್ಷದಿಂದ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಪೂಜೆ ಮಾಡಿಸುತ್ತಿದ್ದೇವೆ. ಬಡವರಿಗೆ ಸಹಾಯ ಮಾಡಿರಿ ಎಂದು ವರಮಹಾಲಕ್ಷ್ಮಿಯೇ ಈ ಸಂಪತ್ತು ಕೊಟ್ಟಿದ್ದಾಳೆ.
ಸಿಎಂಗೆ ಸಡ್ಡು ಹೊಡೆದು ಸಿರುಗುಪ್ಪಾದಲ್ಲಿ ಆಯೋಜಿಸಿದ್ದ ಗ್ರಾಮ ಸ್ಥಳಾಂತರ ಕಾರ್ಯಕ್ರಮದಲ್ಲಿ ಸಚಿವ ಜನಾರ್ದನ ರೆಡ್ಡಿ ವಾಗ್ದಾಳಿ
-ಅವರು (ಮುಖ್ಯಮಂತ್ರಿ ಯಡಿಯೂರಪ್ಪ) ಉಗ್ರಗಾಮಿಗಳ ಬಗ್ಗೆ ಎಲ್ಲರೂ ಚಿಂತಿಸಬೇಕಾಗಿದೆ ಎನ್ನುತ್ತಾರೆ. ಬೆಂಗಳೂರಿನಲ್ಲಿ ಅವರ ಹಿಂದೆಯೇ ಉಗ್ರಗಾಮಿಗಳಿದ್ದಾರೆ.
-ಅವರು ವಯಸ್ಸಾಗಿದ್ದರೂ ತಮ್ಮ ಹಳೆಯ ಚಟ ಬಿಡುತ್ತಿಲ್ಲ. ಅಭಿವೃದ್ಧಿಗಾಗಿ ಪಣ ತೊಟ್ಟಿರುವ ನಮ್ಮ ವಿರುದ್ಧ ನೀಚ ಬುದ್ಧಿ ಪ್ರದರ್ಶನ ಮಾಡುತ್ತಿದ್ದಾರೆ.
-ಬೆಂಗ್ಳೂರಲ್ಲಿ ಭಿಕ್ಷೆ ಎತ್ತಿ ೮೦೦ ಕೋಟಿ ಸಂಗ್ರಹವಾಯಿತು ಎನ್ನುತ್ತಾರೆ. ಆಗಿದ್ದು ೪೦-೫೦ ಕೋಟಿ ಮಾತ್ರ. ನೆರೆ ನೆರವಿಗೆ ಗಣಿ ಮಾಲೀಕರೆಲ್ಲ ಒಟ್ಟಾಗಿ ೫೦೦ ಕೋಟಿ ಸಂಗ್ರಹಿಸಿದ್ದೇವೆ.
-ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗಿ ನಾಶವಾಗಿರುವುದು ೫೦ ಸಾವಿರ ಮನೆಗಳು ಮಾತ್ರ. ಆದರೆ ಕೆಲವರು ೧-೨ ಲಕ್ಷ ಮನೆಗಳನ್ನು ಕಟ್ಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.
ಸೌಜನ್ಯ: ಕನ್ನಡಪ್ರಭ