ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರಾಜ್ಯದ ಐದು ನಗರ ಪ್ರದೇಶಗಳನ್ನು ಅಳತೆ ಮಾಡುವ ಸೋಗಿನಲ್ಲಿ ಕೋಟ್ಯಂತರ ರೂ ಅವ್ಯವಹಾರ

ಬೆಂಗಳೂರು: ರಾಜ್ಯದ ಐದು ನಗರ ಪ್ರದೇಶಗಳನ್ನು ಅಳತೆ ಮಾಡುವ ಸೋಗಿನಲ್ಲಿ ಕೋಟ್ಯಂತರ ರೂ ಅವ್ಯವಹಾರ

Wed, 06 Jan 2010 17:21:00  Office Staff   S.O. News Service
ಬೆಂಗಳೂರು,ಜನವರಿ 6:ಮೈಸೂರು, ಶಿವಮೊಗ್ಗ, ಬಳ್ಳಾರಿ, ಮಂಗಳೂರು ಸೇರಿದಂತೆ ರಾಜ್ಯದ ಐದು ನಗರ ಪ್ರದೇಶಗಳನ್ನು ಅಳತೆ ಮಾಡುವ ಕೇಂದ್ರದ ನೆರವಿನ ಯೋಜನೆಯಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆದಿದ್ದು ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿ‌ಎಸ್ ಶಾಸಕಾಂಗ ನಾಯಕ ಹೆಚ್.ಡಿ.ರೇವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂದಿಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಗಳ ಅಳತೆ ಮಾಡುವ ಈ ಕಾರ್ಯದಲ್ಲಿ ಹಣ ಲೂಟಿಯಾಗಲು ಕಾರಣರಾಗಿರುವ ಭೂಮಾಪನ ಇಲಾಖೆ ಆಯುಕ್ತ ರಾಜೀವ್ ಚಾವ್ಲಾ ಹಾಗೂ ರುದ್ರೇಶ್ ಎಂಬ ಅಧಿಕಾರಿಗಳನ್ನು ತಕ್ಷಣವೇ ಸಸ್ಪೆಂಡ್ ಮಾಡಬೇಕು, ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿಕೊಡಬೇಕು ಎಂದು ಒತ್ತಾಯ ಪಡಿಸಿದರು.

ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ_ಧಾರವಾಡ, ಮಂಗಳೂರು ಹಾಗೂ ಬಳ್ಳಾರಿ ನಗರಗಳನ್ನು ಅಳತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಎಂಟು ಕೋಟಿ ರೂ ಹಾಗೂ ರಾಜ್ಯ ಸರ್ಕಾರ ಎಂಟು ಕೋಟಿ ರೂಗಳನ್ನು ಬಿಡುಗಡೆ ಮಾಡಿವೆ ಎಂದು ವಿವರಿಸಿದರು.

ಈ ಅಳತೆ ಕೆಲಸವನ್ನು ಹೈದ್ರಾಬಾದ್‌ನ ಕಂಪನಿಯೊಂದಕ್ಕೆ ವಹಿಸಲಾಗಿದ್ದು ಈ ಕೆಲಸಕ್ಕೆ ಉಪಯೋಗಿಸುವ ಸರ್ವೇ ಉಪಕರಣಗಳನ್ನು ಸರ್ಕಾರದಿಂದಲೇ ಮೂರು ಕೋಟಿ ರೂಗಳಿಗೆ ಖರೀದಿ ಮಾಡಿ ಒದಗಿಸಲಾಗಿದೆ ಎಂದು ವಿವರಿಸಿದರು.

ಆದರೆ ವಾಸ್ತವವಾಗಿ ಈ ಉಪಕರಣಗಳ ಬೆಲೆ ಒಂದೂವರೆ ಕೋಟಿ ರೂ ಮಾತ್ರ.ಉಳಿದಂತೆ ಒಂದೂವರೆ ಕೋಟಿ ರೂಗಳನ್ನು ಲೂಟಿ ಮಾಡಲಾಗಿದೆ ಎಂದು ರೇವಣ್ಣ ದೂರಿದರು.

ಜಿಪಿ‌ಎಸ್ ಉಪಕರಣದ ಬೆಲೆ ಹನ್ನೆರಡರಿಂದ ಹದಿಮೂರು ಲಕ್ಷ ರೂಗಳಷ್ಟಿದ್ದರೆ ಅದನ್ನು ಇಪ್ಪತ್ತೈದು ಲಕ್ಷ ರೂಗಳಂತೆ ಖರೀದಿಸಲಾಗಿದೆ ಎಂದು ಅವರು ಟೀಕಿಸಿದರು.

ಇಂತಹ ಅವ್ಯವಹಾರಕ್ಕೆ ಕಾರಣರಾದ ರಾಜೀವ್ ಚಾವ್ಲಾ ಅವರ ಪುತ್ರ ಕೂಡಾ ಈ ಅಳತೆ ಕೆಲಸ ಮಾಡುವ ಹೈದ್ರಾಬಾದ್ ಕಂಪನಿಯ ಪಾಲುದಾರರಲ್ಲೊಬ್ಬರು ಎಂಬ ಅಂಶವನ್ನು ಬಹಿರಂಗ ಪಡಿಸಿದರು.

ಸದರಿ ಅಧಿಕಾರಿ ರಾಜೀವ್ ಚಾವ್ಲಾ ಸರ್ಕಾರದ ಮಟ್ಟದಲ್ಲಿ ಭಾರೀ ಪ್ರಭಾವಿಯಾಗಿದ್ದು ನೆಮ್ಮದಿ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಕಾಮೇಟ್ ಟೆಕ್ನಾಲಜೀಸ್ ಕಂಪನಿಯಲ್ಲಿ ಅವರ ಪತ್ನಿ ಅನಿತಾ ಚಾವ್ಲಾ ಅವರೇ ಪಾಲುದಾರರಾಗಿದ್ದಾರೆ ಎಂದು ದೂರಿದರು.

ಇಂತಹ ಅನಿತಾ ಚಾವ್ಲಾ ಅವರಿಗೆ ಸರ್ಕಾರ ಕೆಂಗೇರಿ ಹೋಬಳಿಯ ಕುಂಬಳಗೋಡಿನಲ್ಲಿ ನಾಲ್ಕು ಎಕರೆ ಭೂಮಿ ಮಂಜೂರು ಮಾಡಿದೆ. ಐ‌ಎ‌ಎಸ್ ಅಧಿಕಾರಿಗಳ ಕುಟುಂಬದವರೂ ಹೀಗೆ ಭೂಮಿ ಪಡೆಯುತ್ತಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು,ಯಾವ ಕಾರಣಕ್ಕಾಗಿ ರಾಜೀವ್ ಚಾವ್ಲಾ ಅವರ ಪತ್ನಿಗೆ ನಾಲ್ಕು ಎಕರೆ ಭೂಮಿಯನ್ನು ಮಂಜೂರು ಮಾಡಲಾಯಿತು ಎಂಬ ಬಗೆಗೆ ಸರ್ಕಾರ ಮಾಹಿತಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.


Share: