ಭಟ್ಕಳ, ಜನವರಿ 20: ಮುರ್ಡೇಶ್ವರದಲ್ಲಿ ಮೊನ್ನೆದಿನ ಸಂಜೆ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಮೃತಪಟ್ಟ ವ್ಯಕ್ತಿ ಸುಮಾರು ೩೮ ವರ್ಷ ಪ್ರಾಯದವನಾಗಿದ್ದು, ಸ್ಥಳೀಯನಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟಿದ್ದರಿಂದ ವ್ಯಕ್ತಿಯ ರುಂಡ ಮತ್ತು ಮುಂಡ ಬೇರೆ ಬೇರೆಯಾಗಿ ರೈಲ್ವೆ ಹಳಿಯಲ್ಲಿ ಬಿದ್ದಿದೆ. ಈ ದೃಶ್ಯ ಎಂತವರಲ್ಲೂ ಭಯ ಮೂಡಿಸುವಂತಿತ್ತು. ಮೃತ ವ್ಯಕ್ತಿ ದ.ಕ,ಉಡುಪಿ ಅಥವಾ ಕೇರಳ ಮೂಲದವನಾಗಿರಬೇಕು ಎಂದು ಊಹಿಸಲಾಗಿದ್ದು, ಇದು ಇನ್ನಷ್ಟೇ ಖಚಿತವಾಗಬೇಕಿದೆ. ಈಗಾಗಲೇ ಮುರ್ಡೇಶ್ವರ ಪೊಲೀಸರು ಈತನ ಪತ್ತೆಯ ಕುರಿತು ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮುರ್ಡೇಶ್ವರ ರೈಲ್ವೆ ಹಳಿಯಲ್ಲಿ ಹೊರಗಿನವರು ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ರೈಲ್ವೆ ಹಳಿಯಲ್ಲಿ ದೇಹದೊಂದಿಗೆ ಬೇರೆಯಾಗಿ ಬಿದ್ದಿದ್ದ ಅಪರಿಚಿತ ಮೃತ ದೇಹದ ಧಪನ ಕಾರ್ಯವನ್ನು ನೆರವೇರಿಸಲಾಗಿದೆ.