ಕುಂದಾಪುರ, ಜನವರಿ 16: ರಾಜಕೀಯದೊಂದಿಗೆ ಧರ್ಮ ಸೇರಿಸಿದರೆ ಧರ್ಮ ದುರ್ಬಲಗೊಳ್ಳುತ್ತದೆ ಎಂದು ವಿದಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ನುಡಿದರು. ಅವರು ಇಲ್ಲಿನ ’ಸಹಮತ’ ಸಂಘಟನೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದಿನ ದಿನಗಳಲ್ಲಿ ಕೋಮುಗಲಭೆಗಳು, ಅಹಿತಕರ ಸಂಗತಿಗಳು ಘಟಿಸಿದ ನಂತರ ಶಾಂತಿ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಆದರೆ ಸಮಾಜದ ಒಟ್ಟು ಸೌಹಾರ್ದ ಕಾಪಾಡಬೇಕಿದ್ದರೆ ಯಾವುದೇ ಅಹಿತಕರ ಘಟನೆಗಳು ನಡೆದ ತಕ್ಷಣ ಆ ಘಟನೆಗೆ ಕಾರಣಗಳೇನು ಎಂಬುದನ್ನು ಕಂಡುಕೊಂಡು ಪರಿಹಾರ ಹುಡುಕಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಆ ದಿಸೆಯಲ್ಲಿ ಶಾಂತಿ-ಸಾಮರಸ್ಯಕ್ಕಾಗಿ ’ಸಹಮತ’ ಶ್ರಮಿಸಲಿ ಎಂದರು.
ಚಿಂತಕ ವಸಂತ ಬನ್ನಾಡಿ ಮಾತನಾಡಿ ಕೋಮುವಾದವು ಇಂದು ಲೇಖಕರು, ಸಾಹಿತಿಗಳನ್ನು ಕೂಡ ಬಿಡದೆ ಸರ್ವವ್ಯಾಪಿಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು. ’ಸಹಮತ’ ಸಂಘಟನೆಯು ಕೋಮುವಾದದ ಅಪಾಯಗಳ ಕುರಿತು, ಸೌಹಾರ್ದ ಬದುಕಿನ ಕುರಿತು ಯುವಜನರ ಗಮನ ಸೆಳೆಯಲು ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು, ಕರಪತ್ರಗಳನ್ನು ನಿರಂತರವಾಗಿ ಪ್ರಕಟಿಸಬೇಕು ಎಂದು ಹೇಳಿದರು.
’ಸಹಮತ’ ಸಂಘಟನೆಯ ಶಶಿಧರ ಹೆಮ್ಮಾಡಿ ಸಂಘಟನೆಯ ಉದ್ದೇಶ, ರೂಪುರೇಷೆಗಳ ಕುರಿತು ಸಭೆಗೆ ವಿವರಿಸಿದರು. ವಿಶ್ರಾಂತ ಪ್ರಾಧ್ಯಾಪಕ ವಲೇರಿಯನ್ ಮಿನೇಜಸ್ ಅಧ್ಯಕ್ಷತೆವಹಿಸಿದ್ದರು. ವಿನೋದ್ ಕ್ರಾಸ್ತಾ, ಜಿ.ಪಂ.ಸದಸ್ಯ ದೇವಾನಂದ ಶೆಟ್ಟಿ, ಮಾಜಿ ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ನ್ಯಾಯವಾದಿ ವಿಕಾಸ್ ಹೆಗ್ಡೆ, ಲೇಖಕ ಡಾ.ಹರಿಚರಣ ಶೆಣೈ, ಸ್ಟಾರ್ ಫ್ರೆಂಡ್ಸ್ ಗಣೇಶ್, ಡಿ.ವೈ.ಎಫ್.ಐ ಮುಖಂಡ ಶ್ರೀಕಾಂತ ವಡೇರಹೋಬಳಿ, ವಿ.ಲಕ್ಷಣ, ಜಾನ್ ಮಿನೇಜಸ್, ಲೊಯ್ ಕರ್ವಾಲೊ, ಮಹಮದ್ ಆಸಿರ್, ಮಹಮದ್ ಇಕ್ಬಾಲ್ ಕಟ್ಕೆರೆ, ಕೆ.ಶ್ರೀಧರ, ಜಮೀರ್, ಮಹಮದ್ ರಫೀಕ್, ಕುಸುಮಾಕರ, ನಾಗೇಶ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.