ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ:ಅಪರಾಧ ಮಾಹಿತಿಗಾಗಿ ಟೋಲ್‌ಫ್ರೀ ಎಸ್‌ಎಂಎಸ್ ವ್ಯವಸ್ಥೆ ಆರಂಭ: ಅಪರಾಧ ತಡೆ ಮಾಸಾಚರಣೆಯಲ್ಲಿ ಉಡುಪಿ ಎಸ್ಪಿ ಪವಾರ್

ಉಡುಪಿ:ಅಪರಾಧ ಮಾಹಿತಿಗಾಗಿ ಟೋಲ್‌ಫ್ರೀ ಎಸ್‌ಎಂಎಸ್ ವ್ಯವಸ್ಥೆ ಆರಂಭ: ಅಪರಾಧ ತಡೆ ಮಾಸಾಚರಣೆಯಲ್ಲಿ ಉಡುಪಿ ಎಸ್ಪಿ ಪವಾರ್

Tue, 08 Dec 2009 18:26:00  Office Staff   S.O. News Service
ಉಡುಪಿ, ಡಿ.೮: ಅಪರಾಧ ನಡೆದ ಸ್ಥಳದಿಂದಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಟೋಲ್ ಫ್ರೀ ಎಸ್‌ಎಂಎಸ್ ವ್ಯವಸ್ಥೆಯನ್ನು ಉಡುಪಿ ಜಿಲ್ಲೆಯಲ್ಲಿ ಒಂದು ತಿಂಗಳೊಳಗೆ ಆರಂಭಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಣ್ ಮಧುಕರ್ ಪವಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಉಡುಪಿ ವಿಭಾಗದ ವತಿಯಿಂದ ಮಂಗಳವಾರ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.

ಅಪರಾಧ ತಡೆಯುವುದು ಕೇವಲ ಪೊಲೀಸರ ಕರ್ತವ್ಯ ಮಾತ್ರವಲ್ಲ. ಸಾರ್ವಜನಿಕರು ಕೂಡ ಅವರೊಂದಿಗೆ ಕೈಜೋಡಿಸಿದಾಗ ಪೊಲೀಸರು ಕ್ಷಪ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪೊಲೀಸ್ ಇಲಾಖೆಯಲ್ಲಿ ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆ ಸಿಬ್ಬಂದಿಗಳ ಕೊರತೆ. ಇದನ್ನು ನೀಗಿಸಲು ಸರಕಾರ ಕ್ರಮ ತೆಗೆದುಕೊಂಡಿದ್ದು, ಜಿಲ್ಲೆಗೆ ನೇಮಕಗೊಂಡಿರುವ ೬೦ ಮಂದಿ ಸಿಬ್ಬಂದಿ ಈಗ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಮಾಸಾಚರಣೆಯನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾ ಮಾತನಾಡಿ, ಚೈನ್ನೆಯಲ್ಲಿರುವಂತೆ ‘ಆನ್‌ಲೈನ್ ಪಬ್ಲಿಕ್ ಪ್ರಿವೇಂಶನ್’ ವ್ಯವಸ್ಥೆಯನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಾರ್ವಜನಿಕ ಸಮಸ್ಯೆಗಳನ್ನು ನಿವಾರಿಸಲು ಪೊಲೀಸ್ ಇಲಾಖೆಯಲ್ಲಿ ಇನ್ನಷ್ಟು ಕ್ರಾಂತಿಕಾರಕ ವ್ಯವಸ್ಥೆಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ ಎಂದರು.

ಉಡುಪಿ ಡಿವೈ‌ಎಸ್ಪಿ ಜಯಂತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ವೃತ್ತ ನಿರೀಕ್ಷಕ ಗಿರೀಶ್ ಎಸ್.ವಿ. ಸ್ವಾಗತಿಸಿದರು. ಬ್ರಹ್ಮಾವರ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ ವಂದಿಸಿದರು. ಶ್ರೀಧರ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು. 

ಇದಕ್ಕೂ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಪುರಭವನದವರೆಗೆ ಮೆರವಣಿಗೆ ನಡೆಯಿತು. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರು ಪಾಲ್ಗೊಂಡಿದ್ದರು

Share: