ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ತಲಗೋಡು ತೀರದಲ್ಲಿ ಮರಳು ತೆಗೆಯುವುದನ್ನು ವಿರೋಧಿಸಿ ಗ್ರಾಮಸ್ಥರ ಮನವಿ

ಭಟ್ಕಳ: ತಲಗೋಡು ತೀರದಲ್ಲಿ ಮರಳು ತೆಗೆಯುವುದನ್ನು ವಿರೋಧಿಸಿ ಗ್ರಾಮಸ್ಥರ ಮನವಿ

Wed, 03 Mar 2010 17:08:00  Office Staff   S.O. News Service

ಭಟ್ಕಳ, ಮಾರ್ಚ್ 3; ತಾಲೂಕಿನ ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯ ತಲಗೋಡು ಸಮುದ್ರ ತೀರದಲ್ಲಿ ಉಸುಕು ತೆಗೆಯುವದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಅಲ್ಲಿನ ಗ್ರಾಮಸ್ಥರು ಸೋಮವಾರ ಬೆಳಿಗ್ಗೆ ಸಹಾಯಕ ಕಮೀಷನರರಿಗೆ ಮನವಿ ಸಲ್ಲಿಸಿದ್ದಾರೆ.

 

ಮನವಿಯಲ್ಲಿ ತಲಗೋಡಿನ ಸರ್ವೆ ನಂಬರ್ ೯೫/೧ ರ ಮಾಲ್ಕಿ ಜಾಗದಲ್ಲಿ ಗಜಾನನ ನಾಯ್ಕ ಹಾಗೂ ಗೋಪಾಲಕೃಷ್ಣ ನಾಯ್ಕ ಎಂಬುವವರು ಸರಕಾರದ ಕಾನೂನನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಉಸುಕನ್ನು ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಇದರಿಂದ ಅಕ್ಕಪಕ್ಕದ ಸಾಗುವಳಿ ಜಮೀನಿಗೆ ಸಮುದ್ರದ ನೀರು ಉಕ್ಕಿ ಬೇಸಾಯ ಮಾಡಲು ತೊಂದರೆಯಾಗುತ್ತಿದೆ. ಉಸುಕು ಸಾಗಾಣಿಕೆಯಿಂದ ಪರಿಸರಕ್ಕೂ ಸಹ ಹಾನಿಯಾಗುವ ಸಾಧ್ಯತೆ ಇದ್ದು, ಸರಕಾರಕ್ಕೆ ಉಸುಕು ಸಾಗಾಣಿಕೆಯ ಬಗ್ಗೆ ರಾಯಲ್ಟಿ ಹಣ ಪಾವತಿಸದೇ ಉಸುಕು ತೆಗೆಯವುದರಿಂದ ಸರಕಾರಕ್ಕೂ ನಷ್ಟವಾಗುತ್ತಿದೆ. ಉಸುಕು ತೆಗೆಯುತ್ತಿರುವ ಮಾಲ್ಕಿ ಜಮೀನು ಸಮುದ್ರಕ್ಕೆ ಹೊಂದಿಕೊಂಡಿದ್ದು, ಉಸುಕು ಸರಕಾರದ ಸ್ವತ್ತಾಗಿರುತ್ತದೆ. ಹೀಗೆ ಅನಧಿಕೃತವಾಗಿ ಉಸುಕು ಸಾಗಾಣಿಗೆ ಮಾಡುವುದು ಸರಿಯಲ್ಲ. ಈ ಬಗ್ಗೆ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಮನವಿ ಸ್ವೀಕರಿಸಿದ ಸಹಾಯಕ ಕಮೀಷನರ ಡಾ. ಕೆ ವಿ ತ್ರಿಲೋಕಚಂದ್ರ ಈ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು. ಮನವಿ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರಾದ ಶ್ರೀನಿವಾಸ ನಾಯ್ಕ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ, ಮಾದೇವ ನಾಯ್ಕ, ಗಣಪತಿ ನಾಯ್ಕ, ಮಾಸ್ತಪ್ಪ ನಾಯ್ಕ, ಸುಕ್ರಯ್ಯ ನಾಯ್ಕ, ಜಟ್ಟಪ್ಪ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.


Share: