ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಅಜ್ಮೀರ್ ದರ್ಗಾ ಸ್ಫೋಟ: ಆರೋಪಿಯ ಬಂಧನ

ಅಜ್ಮೀರ್ ದರ್ಗಾ ಸ್ಫೋಟ: ಆರೋಪಿಯ ಬಂಧನ

Sat, 01 May 2010 10:11:00  Office Staff   S.O. News Service

ಅಜ್ಮೀರ್ ದರ್ಗಾ ಸ್ಫೋಟ: ಆರೋಪಿಯ ಬಂಧನ

ಅಜ್ಮೀರ್, ಎ.30: ಹಿಂದುತ್ವ ಉಗ್ರ ಸಂಘಟನೆಯೊಂದರ ಸಂಪರ್ಕ ಹೊಂದಿದ್ದನೆನ್ನಲಾದ ವ್ಯಕ್ತಿಯೋರ್ವನನ್ನು 2007ರಲ್ಲಿ ನಡೆದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ತಾನ ಪೊಲೀಸರು ಬಂಧಿಸಿದ್ದಾರೆ. ಸ್ಫೋಟದ ವೇಳೆ ಮೂವರು ಪ್ರಾಣ ಕಳೆದುಕೊಂಡಿದ್ದರಲ್ಲದೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಶಂಕಿತ ದೇವೇಂದ್ರ ಗುಪ್ತಾ ಎಂಬಾತನನ್ನು ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಆಪಾದಿತ ದೇವೇಂದ್ರ ಗುಪ್ತಾ ಅಜ್ಮೀರ್‌ನ ಬಿಹಾರಿಗಂಜ್‌ನ ನಿವಾಸಿಯಾಗಿದ್ದು, ಬುಧವಾರ ತನ್ನ ಅಸ್ವಸ್ಥ ತಾಯಿಯನ್ನು ಭೇಟಿಯಾಗಲು ಹೊರಟಿದ್ದ ವೇಳೆ ರಾಜಸ್ತಾನದ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಆತನನ್ನು ಬಂಧಿಸಿರುವುದಾಗಿ ಮೂಲಗಳು ವಿವರಿಸಿವೆ.

ಹಿಂದುತ್ವ ಉಗ್ರ ಸಂಘಟನೆ ‘ಅಭಿನವ್ ಭಾರತ್ ಸಂಘಟನ್’ನ ಸಂಪರ್ಕವನ್ನು ಗುಪ್ತಾ ಹೊಂದಿದ್ದನು ಎನ್ನಲಾಗಿದ್ದು, 2007ರ ಅಕ್ಟೋಬರ್‌ನಲ್ಲಿ ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್ ಚಿಸ್ತಿ ದರ್ಗಾದೊಳಗೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದನೆಂದು ಶಂಕಿಸಲಾಗಿದೆ ಎಂದು ಅವು ಹೇಳಿವೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಜೊತೆಗೆ ಗುಪ್ತಾ ಸಂಪರ್ಕ ಹೊಂದಿದ್ದನೆನ್ನಲಾಗಿದ್ದು, ಆ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗುಪ್ತಾ ಜಾರ್ಖಂಡ್‌ನಲ್ಲಿ ತಂಗಿದ್ದು, ಬುಧವಾರ ಅಜ್ಮೀರ್‌ಗೆ ಆಗಮಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ಸಿಮ್ ಕಾರ್ಡೊಂದು ದೊರೆತಿದ್ದು, ಅದು ಆತನನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಯಿತು ಎಂದು ಅವರು ಹೇಳಿದ್ದಾರೆ.


Share: