ಬೆಂಗಳೂರು, ಫೆಬ್ರವರಿ ೧೨:ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವುದಾಗಿ ಬೆದರಿಕೆ ಒಡ್ಡಿರುವ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸುವಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರೇಮಿಗಳ ದಿನಕ್ಕೆ ಅಡ್ಡಿ ಮಾಡುವುದಾಗಿ ಹೇಳುವ ಮೂಲಕ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಮುನ್ನಚ್ಚರಿಕೆ ಕ್ರಮವಾಗಿ ಅವರನ್ನು ಬಂಧಿಸುವಂತೆ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದರು.
ಪ್ರಮೋದ್ ಮುತಾಲಿಕ್ಗೆ ಮಸಿ ಬಳಿದ ಘಟನೆ ಖಂಡನಾರ್ಹ ಮಸಿ ಬಳಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದ ಅವರು ಸ್ಪಷ್ಟಪಡಿಸಿ ಒಂದು ವೇಳೆ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರಮೋದ್ ಮುತಾಲಿಕ್ಗೆ ಸರ್ಕಾರ ಶಾಮೀಲಾಗಿದೆ ಪ್ರಮೋದ್ ಮುತಾಲಿಕ್ ಬಹಿರಂಗವಾಗಿ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿದ್ದರು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕರಂತೆ ಸರ್ಕಾರ ವರ್ತಿಸುತ್ತಿದೆ ಎಂದು ಟೀಕಿಸಿದರು.
ಬಳ್ಳಾರಿಯ ಗಣಿ ರೆಡ್ಡಿ ಸಚಿವರು ಹಾಗೂ ಸಂಬಂಧಿಗಳ ಮೇಲೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವಾಪಾಸ್ ಪಡೆದಿರುವ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಅವರು, ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಗಣಿ ರೆಡ್ಡಿಗಳನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಂದಿನಿ ಹಾಲಿನ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ ಅವರು ಈ ಹಾಲಿನ ದರ ಏರಿಕೆಯಿಂದ ರೈತರಿಗೆ ಪ್ರಯೋಜನವಿಲ್ಲ. ಹಾಗಾಗಿ ಹಾಲಿನ ದರ ಏರಿಕೆ ಬೇಡ ಎಂದರು.
ಭ್ರಷ್ಟಾಚಾರ:
ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಕೆಲವು ಶಿಕ್ಷಣ ಸಂಸ್ಥೆಗಳಿಗೆ ತಾಂತ್ರಿಕ ಕಾರಣಗಳನ್ನು ಇಟ್ಟಿಕೊಂಡು ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದ ಅವರು ದೂರಿದರು. ರಾಜ್ಯದ ೩೫ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಿಸುವ ಬೆದರಿಕೆಯೊಡ್ಡಿ ಶಿಕ್ಷಣ ಸಚಿವರು ತಮ್ಮ ಆಪ್ತ ಅಧಿಕಾರಿ ಮಾಹಂತೇಶ್ ಭಟ್ರ ಮೂಲಕ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಈ ಭ್ರಷ್ಟಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಗೋಹತ್ಯ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಒಂದು ಧರ್ಮದವರಿಗೆ ತೊಂದರೆ ಕೊಡುವ ಹುನ್ನಾರವನ್ನು ಸರ್ಕಾರ ನಡೆಸಿದ್ದು, ಈ ಕಾಯ್ದೆ ಜಾರಿ ಮಾಡುವ ಬದಲು ಕೇಂದ್ರದ ಕಾಯ್ದೆಯನ್ನೇ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಭಾಗಿಯಲ್ಲ:
ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಮಸಿ ಬಳಿದಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲಿ ಇದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಇಲ್ಲ ಎಂದು ಪಕ್ಷದ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಮುತಾಲಿಕ್ ಮಸಿ ಬಳಿದ ಘಟನೆಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ ಹಾಗಾಗಿ ಶ್ರೀರಾಮಸೇನೆ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮೇಲೆ ದಾಳಿ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.