ಮೂಡಬಿದ್ರಿ, ಮಾರ್ಚ್ ೨: ನಗರದ ಡಾ. ಎಂ.ವಿ.ಎಸ್.ಐ.ಟಿ. ವಿದ್ಯಾಲಯದ ಎರಡನೇ ವಾರ್ಷಿಕ ಕ್ರೀಡಕೂಟವನ್ನು ಮಾಜಿ ಸಚಿವ ಅಮರನಾಥ ಕಾರಂತ್ ರವರು ಇಂದು ಉದ್ಘಾಟಿಸಿದರು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಲು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ತೋಡಾರಿನಲ್ಲಿ ನೂತನ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಲು ಶ್ರಮವಹಿಸಿದ ಶ್ರೀ ಎಂ.ವಿ. ಶೆಟ್ಟಿಯವರನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ರಾಮಗೋಪಾಲ ಶೆಟ್ಟಿಯವರು ವಿದ್ಯಾಲಯದಲ್ಲಿ ಪ್ರಸ್ತುತ ಉಪಸ್ಥಿತವಿರುವ ಕ್ರೀಡಾ ಸೌಲಭ್ಯಗಳನ್ನು ಶೀಘ್ರವೇ ವಿಸ್ತರಿಸುವುದಾಗಿ ಭರವಸೆ ನೀಡಿದರು. ಬಳಿಕ ನಡೆದ ಪ್ರಶಸ್ತಿಪತ್ರ ಪ್ರದಾನ ಸಮಾರಂಭದಲ್ಲಿ ಡಾ. ದಿವ್ಯಾಂಜಲಿಯವರು ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಿದರು.
ಪ್ರಾಂಶುಪಾಲರಾದ ಡಾ. ಸಂದೀಪ್ ಜೆ. ನಾಯಕ್ ರವರು ಸ್ವಾಗತಿಸಿದರು. ರಾಬಿನ್ ಫೆರ್ನಾಂಡಿಸ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಪಿ.ಡಿ. ಶಶಿಪ್ರಸಾದ್ ವಾರ್ಷಿಕ ಕ್ರೀಡಾ ವರದಿಯನ್ನು ಓದಿದರು. ಶೃತಿ ಹೆಗಡೆ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

