ಭಟ್ಕಳ, ಜನವರಿ 21:ತಾಲೂಕಿನ ವೆಂಕಟಾಪುರ ಗ್ರಾಮದ ಸರ್ವೆ ನಂ ೮೯ ರಲ್ಲಿ ಕಳೆದ ಹಲವಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಬಡ ಕೂಲಿಕಾರರಿಗೆ ಜಾಗ ಖುಲ್ಲಾಪಡಿಸುವಂತೆ ಅರಣ್ಯ ಇಲಾಖೆ ನೋಟೀಸು ನೀಡಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಭಟ್ಕಳ ಘಟಕ ತೀವ್ರವಾಗಿ ಖಂಡಿಸಿದೆ.
ಬಡ ಕೂಲಿಕಾರರಿರುವ ಜಾಗವನ್ನು ಖುಲ್ಲಾಪಡಿಸಿದರೆ ರೈತ ಸಂಘ ಯಾವುದೇ ಹೋರಾಟಕ್ಕೂ ಸಿದ್ದವಾಗಿದೆ. ಸದ್ಯದಲ್ಲೇ ತಾಲೂಕಿನಲ್ಲಿರುವ ಅರಣ್ಯ ಅತಿಕ್ರಮಣದಾರರನ್ನು ಸಂಘಟಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಚಾಲಕ ಮಾದೇವ ಶಿರಾಲಿ ಹಾಗೂ ಸುಭಾಸ ಕೊಪ್ಪಿಕರ ತಿಳಿಸಿದ್ದಾರೆ.