ಬೆಂಗಳೂರು,ಜನವರಿ 8: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೊಸ ಯುದ್ಧಕ್ಕೆ ಅಣಿಯಾಗುವುದಾಗಿ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರ ಜತೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನರ ಹಿತ ಕಾಯುವಲ್ಲಿ ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಬಿಬಿಎಂಪಿ ಚುನಾವಣೆಯ ಕಣಕ್ಕೆ ಇಳಿಯುವುದಾಗಿ ಹೇಳಿದರು.
ಕಳೆದ ಹದಿನೆಂಟು ತಿಂಗಳ ಬಿಜೆಪಿ ಆಡಳಿತಾವಧಿಯಲ್ಲಿ ರೈತರಿಂದ ಹಿಡಿದು ಎಲ್ಲ ವರ್ಗದವರಿಗೆ ಅನ್ಯಾಯವಾಗಿದೆ ಎಂದು ಟೀಕಿಸಿದ ಅವರು,ಇವರ ಕಾರ್ಯವೈಖರಿಯ ಬಗ್ಗೆ ಜನತೆ ಬೇಸತ್ತಿದ್ದಾರೆ.ಹೀಗಾಗಿ ಚುನಾವಣೆಯಲ್ಲಿ ಇದಕ್ಕಿಂತ ಬೇರೆ ಅಸ್ತ್ರ ಬೇಕಿಲ್ಲ ಎಂದರು.
ಈಗಾಗಲೇ ನಮ್ಮ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.ಆದರೆ ನಾವು ಸಮರ್ಥರು,ಜನರ ಹಿತಕ್ಕೆ ಸ್ಪಂದಿಸುವಂತವರನ್ನು ನೋಡಿಯೇ ಟಿಕೇಟ್ ನೀಡುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಕೆಲವರು ಏಕಾಏಕಿಯಾಗಿ ಸಂಸದರು,ಶಾಸಕರು ಆಗಬೇಕು ಎಂಬ ಭ್ರಮೆಯಲ್ಲಿದ್ದಾರೆ.ಅಂತವರು ಭ್ರಮೆಯನ್ನು ಬಿಟ್ಟು ಮೊದಲು ಕೆಳಹಂತದ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಗಳಿಸಬೇಕು ಎಂದು ಅವರು ಮಾರ್ಮಿಕವಾಗಿ ನುಡಿದರು.
ಕೆಳ ಹಂತದ ಚುನಾವಣೆಗಳಲ್ಲಿ ಗೆದ್ದು ಬಂದರೆ ಆಡಳಿತ ನಡೆಸುವುದು ಹೇಗೆ ಎಂಬ ಅನುಭವವಾಗುತ್ತದೆ.ಯಾವುದೋ ಒತ್ತಡದಿಂದ ಏಕಾಏಕಿ ಸಂಸದರು,ಶಾಸಕರು ಆದರೆ ಇನ್ಯಾವುದೋ ಒತ್ತಡಕ್ಕೆ ಮಣಿದು ಪಕ್ಷದ ಪಾಲಿಗೆ ಮುಳ್ಳಾಗುತ್ತಾರೆ ಎಂದು ಅಭಿಪ್ರಾಯಿಸಿದರು.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ.ಕೆಳ ಹಂತದಿಂದ ದುಡಿದವರಿಗೆ ಮಾತ್ರ ಆ ಪಕ್ಷದ ಘನತೆ,ಬೆಲೆ ಗೊತ್ತಿರುತ್ತದೆ.ಏಕಾಏಕಿ ಅಧಿಕಾರ ಹಿಡಿದವರಿಗೆ ಇದು ಅರ್ಥವಾಗುವುದಿಲ್ಲ ಎಂದರು.
ಜೆಡಿಎಸ್ ಜತೆಗಿನ ಮೈತ್ರಿಗೆ ಸಂಬಂಧಿಸಿದಂತೆ ತಾವು ಏನೂ ಹೇಳುವುದಿಲ್ಲ ಎಂದು ನುಡಿದ ಡಿಕೆಶಿ,ಪಕ್ಷದ ರಾಷ್ಟ್ರೀಯ ವರಿಷ್ಟರು ಕೈಗೊಳ್ಳುವ ತೀರ್ಮಾನಕ್ಕೆ ತಾವು ಬದ್ಧವಾಗಿರುತ್ತೇವೆ ಎಂದು ಸ್ಪಷ್ಟ ಪಡಿಸಿದರು.