ಕಾರವಾರ: ಮುಖ್ಯಮಂತ್ರಿ ಗಳ ಸೂಚನೆಯಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 25 ರಂದು ನಗರದ ಪೊಲೀಸ್
ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10.30 ಗಂಟೆಗೆ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೂಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಉಸ್ತುವಾರಿ ಸಚಿವರ ಹಾಗೂ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ “ಜನತಾ ದರ್ಶನ” ಹಮ್ಮಿಕೊಳ್ಳಲಾಗಿವುದು.
ಜನತಾ ದರ್ಶನ ಕ್ಕೆ ಬರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಂಡು, ಯಾವುದೇ ಲೋಪದೋಷಗಳು ಆಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಇಲಾಖೆಗಳು ತಮ್ಮಲ್ಲಿ ಬಾಕಿ ಇರುವ ಮನವಿ, ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು ಹಾಗೂ ತಮ್ಮ ಮಟ್ಟದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದ ಅರ್ಜಿಗಳನ್ನು ಸೂಕ್ತ ಕಾರಣ ನೀಡಿ, ಹಿಂಬರಹ ನೀಡಬೇಕು ಎಂದು ಸೂಚನೆ ನೀಡಿದರು.
ಜನತಾ ದರ್ಶನ ಕಾರ್ಯಕ್ರಮದ ಕುರಿತಂತೆ ಎಲ್ಲಾ ಇಲಾಖೆ ಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ, ಸಾರ್ವಜನಿಕರಿಂದ ಕುಂದು ಕೊರತೆಗಳ ಕುರಿತಂತೆ ಅರ್ಜಿಗಳನ್ನು ಸ್ವೀಕಾರ ಮಾಡುವಂತೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕೂಡಾ ಪ್ರತ್ಯೇಕವಾಗಿ ಕೌಂಟರ್ ಗಳನ್ನು ತೆರೆದು ಅರ್ಜಿ ಸ್ವೀಕರಿಸುವಂತೆ ನಿರ್ದೇಶನ ನೀಡಿದರು.
ಜಿ. ಪಂ. ಸಿಇಒ ಈಶ್ವರ ಕುಮಾರ ಕಾಂದೂ ಅವರು ಮಾತನಾಡಿ ಸಾರ್ವಜನಿಕರು ಸಲ್ಲಿಸುವ ಕುಂದು ಕೊರತೆ ಅರ್ಜಿಗಳ ಕುರಿತಂತೆ ನಿಗಧಿತ ಅವಧಿಯಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಹಾಗೂ ಕಾರ್ಯಕ್ರಮ ನಡೆಯುವ ದಿನದಂದು ಸಾಧ್ಯವಾದಷ್ಟು ಹೆಚ್ಚಿನ ಅರ್ಜಿಗಳನ್ನು ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಿದರು.