ಹಾಸನ-ಮಾ-೧೫. ಸಮಾಜದ ಶೋಷಿತ ಬಡಜನರ ಅಭಿವೃದ್ಧಿಗಾಗಿ ಸರ್ಕಾರ ತಂದಂತಹ ಶಾಸನ ಅನುಷ್ಠಾನಕ್ಕೆ ಕಾನೂನು ವಿದ್ಯಾರ್ಥಿಗಳ ಮತ್ತು ವಕೀಲರ ಸಹಕಾರ ಸರ್ಕಾರಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೊಂದಣಿ ಅಧಿಕಾರಿ ಹೆಚ್.ಎಲ್.ಗುರುಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಎಂ.ಕೃಷ್ಣ ಕಾನೂನು ವಿದ್ಯಾಲಯದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸರ್ಕಾರ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ದೊರೆಯುವ ಸೌಲಭ್ಯ ಕುರಿತು ಮಾತನಾಡಿದರು.
ಮಂಡಳಿಯಿಂದ ಕಾರ್ಮಿಕರಿಗೆ ಚಿಕಿತ್ಸೆಗಾಗಿ ೨೦೦೦ರೂ ಅಪಘಾತಕ್ಕೀಡಾಗಿ ಮೃತರಾದರೆ ೧ಲಕ್ಷ ರೂ, ಶಸ್ತ್ರ ಚಿಕಿತ್ಸೆಗಾಗಿ ೫೦೦೦೦ರೂ ಮೃತರ ಅಂತ್ಯಕ್ರಿಯೆಗೆ ೪೦೦೦ ರೂ. ಮಹಿಳಾ ಕಾರ್ಮಿಕರಿಗೆ ಹೆರಿಗೆಗೆ ೬೦೦೦ರೂ, ಮಕ್ಕಳ ವಿದ್ಯಾಭ್ಯಾಸಕ್ಕೆ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪಾಸಾದವರಿಗೆ ೩೦೦೦ರೂ ಐಟಿಐಡಿಪ್ಲೋಮ ಓದುವವರಿಗೆ ೩೦೦೦ ರಊ. ಪದವಿ ವ್ಯಾಸಂಗ ಮಾಡುವವರಿಗೆ ೩೦೦೦ ಸ್ನಾತಕೋತ್ತರ ಪದವಿ ಓದುವವರಿಗೆ ೬೦೦೦ರೂ ಮೆಡಿಕಲ್ /ಇಂಜಿನಿಯರಿಂಗ್ ಓದುವವರಿಗೆ ೧೦,೦೦೦ ರೂ ಸಹಾಯಧನ ಸಿಗುತ್ತವೆಂದರು.
ಮಂಡಳಿಯಿಂದ ಮನೆ ಕಟ್ಟಲು ಸಾಲ, ಕೆಲಸದ ಉಪಕರಣ ಖರೀದಿಸಲು ಸಾಲ ಮತ್ತು ಶಾಶ್ವತ ಅಂಗಹೀನರಾದವರಿಗೆ ಮಾಸಿಕ ಪಿಂಚಣಿ, ೫೦ ವರ್ಷವಾದ ಮಹಿಳೆಯರಿಗೆ, ೫೫ ವರ್ಷವಾದ ಪುರುಷರಿಗೆ ಮಾಸಿಕ ಪಿಂಚಣಿ ಸೌಲಭ್ಯವಿದ್ದು ಕಾರ್ಮಿಕರಿಗೆ ಈ ಕಾನೂನಿನ ಬಗ್ಗೆ ಅರಿವಿಲ್ಲದೆ ಎಲ್ಲಾ ಕಾರ್ಮಿಕರು ನೊಂದಣಿಯಾಗಿಲ್ಲ ಈ ನಿಟ್ಟಿನಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಮಿಕರಿಗೆ ಇದರ ಬಗ್ಗೆ ಅರಿವು ಮೂಡಿಸಿ ಹೆಚ್ಚು ಜನ ಕಟ್ಟಡ ಕಾರ್ಮಿಕರನ್ನು ಮಂಡಳಿಗೆ ನೊಂದಾಯಿಸಲು ಪ್ರೊತ್ಸಾಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ವಿ.ಶ್ರೀನಿವಾಸ್ ಮಾತನಾಡಿ ಸ್ವತಂತ್ರಾನಂತರ ಭಾರತದ ಬಡ ಜನರ, ಶೋಷಿತರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಸಮಾಜ ಕಲ್ಯಾಣ ಶಾಸನಗಳನ್ನು ಜಾರಿಗೆ ತಂದಿದ್ದು ಅವುಗಳ ಅರಿವಿಲ್ಲದೆ ಸಾಮಾನ್ಯ ಜನ ಅದರ ಸದುಪಯೋಗ ಪಡೆಯುವಲ್ಲಿ, ವಿಫಲರಾಗಿದ್ದಾರೆ. ಈ ಕಲ್ಯಾಣಕ್ಕಾಗಿ ಇಟ್ಟ ಹಣ ಸಹಜವಾಗಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಜಾರಿಗೆ ತಂದ ಶಾಸನಗಳ ಬಗ್ಗೆ ತಇಳಿಹೇಳುವಲ್ಲಿ,ಕಾನೂನು ಕಲಿತವರ ಪಾತ್ರ ಬಹಳ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಅಧ್ಯಯನ ಮಾಡಿದವರು ಸಮಾಜ ಮುಖಿಯಾಗಿ ಕ್ರಿಯಾಶೀಲ ರಾಗಬೇಕೆಂದು ಕರೆ ನೀಡಿದರು. ಶ್ರೀನಿವಾಸ್ ಸ್ವಾಗತಿಸಿ ಕೊನೆಗೆ ವಂದಿಸಿದರು.