ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಆನ್‍ಲೈನ್ ಮೂಲಕ ಗ್ರಾಪಂ ಆಸ್ತಿ ತೆರಿಗೆ ಪಾವತಿಗೆ ಅವಕಾಶ

ಕಾರವಾರ: ಆನ್‍ಲೈನ್ ಮೂಲಕ ಗ್ರಾಪಂ ಆಸ್ತಿ ತೆರಿಗೆ ಪಾವತಿಗೆ ಅವಕಾಶ

Sun, 03 Jul 2022 01:14:19  Office Staff   S O News

ಕಾರವಾರ :  ಆನ್‍ಲೈನ್ ಮೂಲಕ ಹಲವು ಸೇವೆಗಳನ್ನು ಒಂದೇ ಸೂರಿನಲ್ಲಿ ಒದಗಿಸುವ ಉದ್ದೇಶದಿಂದ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿಪಡಿಸಿರುವ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದಲ್ಲಿಯೇ  ಸಾರ್ವಜನಿಕರು ಇನ್ನುಮುಂದೆ ಇಲಾಖೆಯಡಿ ಲಭ್ಯವಿರುವ ವಿವಿಧ ಸೇವೆಗಳನ್ನು ಪಡೆಯುವುದರ ಜೊತೆಗೆ ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆಯನ್ನೂ ಆನ್‍ಲೈನ್‍ನಲ್ಲೇ ಪಾವತಿಸ ಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಅನುಷ್ಠಾನ ಗೊಳಿಸಿರುವ ಬಾಪೂಜಿ ಸೇವಾ ಕೇಂದ್ರಗಳ ಬಗ್ಗೆ ಹಾಗೂ ಈ ಕೇಂದ್ರಗಳ ಮೂಲಕ ವಿತರಿಸಲಾಗುವ ಸೇವೆಗಳ ಬಗೆಗಿನ ನಿರ್ದಿಷ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ/ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಬ್ರಾಂಡಿಂಗ್‍ನ್ನು ಅಳವಡಿಸಲಾಗುವುದು.
- ಪ್ರಿಯಾಂಗಾ ಎಂ.,
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2016-17ನೇ ಆರ್ಥಿಕ ಸಾಲಿನಿಂದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮತ್ತು ಇತರೆ ಇಲಾಖೆಯ ಹಲವು ಸೇವೆಗಳ ವಿತರಣೆಗಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ ಪ್ರಸ್ತುತವಾಗಿ ಇಲಾಖೆಯಿಂದ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶವನ್ನೂ ಅಭಿವೃದ್ಧಿಪಡಿಸಿ ಅನುಷ್ಠಾನ ಗೊಳಿಸಲಾಗಿದೆ ಎಂದರು.

ಲಭ್ಯವಿರುವ ಸೇವೆಗಳು:
ಜಿಲ್ಲೆಯ ಸಾರ್ವಜನಿಕರು ಬಾಪೂಜಿ ಸೇವಾ ಕೇಂದ್ರದ ತಂತ್ರಾಂಶ  https://bsk.karnataka.gov.in ನ್ನು ಬಳಸುವುದರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಲಭ್ಯವಿರುವ ಕಟ್ಟಡ ನಿರ್ಮಾಣ ಪರವಾನಗಿ, ಹೊಸ ನೀರು ಸರಬರಾಜು ಸಂಪರ್ಕ, ಕುಡಿಯುವ ನೀರಿನ ಮತ್ತು ಬೀದಿ ದೀಪಗಳ ನಿರ್ವಹಣೆ, ವ್ಯಾಪಾರ ಪರವಾನಗಿ, ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ಜನನ ಮತ್ತು ಮರಣ ಪ್ರಮಾಣಪತ್ರ, ನಿರಾಕ್ಷೇಪಣಾ ಪ್ರಮಾಣಪತ್ರ, ನರೇಗಾದಡಿ ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿ ಹಾಗೂ ಉದ್ಯೋಗ ಒದಗಿಸುವುದು, ವಿಶಿಷ್ಟ ಅಂಗವೈಕಲ್ಯ ಐಡಿಯನ್ನು ಆನ್‍ಲೈನ್‍ನಲ್ಲಿಯೇ ಪಡೆಯಲು ಅವಕಾಶವಿದೆ. ಅಲ್ಲದೇ ಈ ಎಲ್ಲ ಸೇವೆಗಳ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-22032238ಗೆ ಸಂಪರ್ಕಿಸಬಹುದಾಗಿದೆ.


Share: