ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸುಪ್ರೀಂ ಕೋರ್ಟಿನ ಆದೇಶಗಳನ್ನು ಹೋರಾಟದ ಆಯುಧಗಳಾಗಿ ಬಳಸಿ !

ಸುಪ್ರೀಂ ಕೋರ್ಟಿನ ಆದೇಶಗಳನ್ನು ಹೋರಾಟದ ಆಯುಧಗಳಾಗಿ ಬಳಸಿ !

Wed, 20 Jan 2010 02:25:00  Office Staff   S.O. News Service

india_supremecourt.jpg?w=241&h=256

ಭಾರತದಲ್ಲಿ ಹಸಿವಿನ ವಿರುಧ್ಧ ನಡೆದ ಹಲವು ಚಳುವಳಿಗಳ ಒತ್ತಡದಿಂದ ಸ್ವತಂತ್ರ ಭಾರತದ ಸರ್ಕಾರಗಳು ಹಲವು ಯೋಜನೆಗಳನ್ನು ಕಾಲಕಾಲಕ್ಕೆ ಅಂಗೀಕರಿಸಿವೆ.  ಈ ಯೋಜನೆಗಳ ಜಾರಿ ಹಸಿವಿನ ಸಮಸ್ಯೆ ಬಗೆಹರಿಸಿ ಬಿಕ್ಕಟ್ಟನ್ನು ನಿವಾರಿಸಬೇಕಿತ್ತು.  ಆದರೆ ಈ ಯೋಜನೆಗಳ ಜಾರಿ - ಸಾಕಷ್ಟು ಸಂಪನ್ಮೂಲಗಳ ಅಭಾವ, ಜಾರಿಗೆ ತಕ್ಕ ಬಧ್ಧತೆ ಇರುವ ಯಂತ್ರದ ಕೊರತೆ, ಸಾರ್ವಜನಿಕ ಅರಿವು ಮತ್ತು ಒತ್ತಡದ ಕೊರತೆ, ಭ್ರಷ್ಟಾಚಾರ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಗ್ರಾಮೀಣ ಪಟ್ಟಭದ್ರ ಹಿತಾಸಕ್ತಿಗಳ ವಿರೋಧ-ಪ್ರತಿರೋಧ, ಅಧಿಕಾರಶಾಹಿಯ ನಿರ್ಲಕ್ಷ - ಇಂತಹ ಹಲವು ಕಾರಣಗಳಿಂದ ತೃಪ್ತಿಕರವಾಗಿಲ್ಲ.  1980ರ ದಶಕದಲ್ಲಿ ತಂದ ಆರ್ಥಿಕದ 'ಉದಾರೀಕರಣ-ಖಾಸಗೀಕರಣ', 1990ರ ದಶಕದ 'ಜಾಗತೀಕರಣ'ದ ನೀತಿಗಳು ಈ ದಶಕದ ಆರಂಭದ ಹೊತ್ತಿಗೆ ಗ್ರಾಮೀಣ ಬೆಳವಣಿಗೆ, ಬಡತನ ಮತ್ತು ಹಸಿವಿನ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿವೆ. 

 

 

ಸುಪ್ರೀಂ ಕೋರ್ಟಿನ ಚಾರಿತ್ರಿಕ ಮಧ್ಯಂತರ ತೀರ್ಪು ಮತ್ತು ಆದೇಶಗಳು

ಈ ಹಿನ್ನೆಲೆಯಲ್ಲಿ ಪಿ.ಯು.ಸಿ.ಎಲ್. (ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್) 2001ರಲ್ಲಿ ಸುಪ್ರೀಂ ಕೋರ್ಟಿನ ಮುಂದೆ ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿ.ಐ.ಎಲ್.) ತಂದಿತು. ಹಸಿವು ಮತ್ತು ಹಸಿವಿನ ಸಾವುಗಳನ್ನು ಕೊನೆಗೊಳಿಸುವ ಹಲವು ಸರ್ಕಾರಿ ಕಾರ್ಯಕ್ರಮಗಳಿಗೆ ಕಾನೂನಿನ ಹರಿತ ನಿಡುವ, ಆಹಾರದ ಹಕ್ಕನ್ನು ಕಾನೂನುಬಧ್ಧ ಹಕ್ಕು ಮತ್ತು ಸರ್ಕಾರಗಳಿಗೆ ಕಾನೂನುಬಧ್ಧ ಬಾಧ್ಯತೆ ಮಾಡುವ ಪ್ರಸ್ತಾವ ಇತ್ತು. ನವಂಬರ್ 28, 2001 ರಂದು ಸುಪ್ರೀಂ ಕೋರ್ಟು ಚಾರಿತ್ರಿಕ ಮಧ್ಯಂತರ ತೀರ್ಪು ನೀಡಿತು.  ಸುಪ್ರೀಂ ಕೋರ್ಟು ನೀಡಿದ ಚಾರಿತ್ರಿಕ ಮಧ್ಯಂತರ ತೀರ್ಪಿನ ಮೂರು ಮುಖ್ಯ ಅಂಶಗಳು ಹೀಗಿವೆ:

- ಆಹಾರ ಮತ್ತು ಪೌಷ್ಟಿಕಾಂಶಗಳ ಪೂರೈಕೆಯ ಎಂಟು ರಾಷ್ಟ್ರೀಯ ಯೋಜನೆಗಳ (ಗುರಿ-ನಿರ್ಧಾರಿತ ಸಾರ್ವಜನಿಕ ವಿತರಣಾ ವ್ಯವಸ್ಥೆ, ಅಂತ್ಯೋದಯ ಅನ್ನ ಯೋಜನೆ, ಮಧ್ಯಾಹ್ನದ ಶಾಲಾ ಬಿಸಿಯೂಟ, ಸಮಗ್ರ ಮಕ್ಕಳ ಬೆಳವಣಿಗೆ, ರಾಷ್ಟ್ರೀಯ ಹೆರಿಗೆ ಸೌಲಭ್ಯ, ರಾಷ್ಟ್ರೀಯ ವೃಧ್ಧಾಪ್ಯ ಪೆನ್ಶನ್, ಅನ್ನಪೂರ್ಣ, ರಾಷ್ಟ್ರೀಯ ಕುಟುಂಬ ಸೌಲಭ್ಯ) ಜಾರಿಯನ್ನು 'ಕಾನೂನುಬಧ್ಧ ಬಾಧ್ಯತೆ' ಆಗಿ ಪರಿವರ್ತನೆ
- ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ಆರಂಭಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ
- ಈ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಿ ಅವು ಪಾರದರ್ಶಕ ರೀತಿಯಲ್ಲಿ ಜಾರಿಯಾಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ

ಈ ತೀರ್ಪಿನ ಜಾರಿಯ ಪ್ರಗತಿ ಪರಿಶೀಲಿಸಲು ಕೋರ್ಟು ಕಮಿಶನರ್ಗಳನ್ನು ನೇಮಿಸಿತು. ತೀರ್ಪಿನ ಜಾರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗಿದೆ. ಹಲವು ವರ್ಷಗಳ ಕಾಲ ನಡೆಯುತ್ತಿರುವ ಈ ಚಾರಿತ್ರಿಕ ಕೇಸಿನಲ್ಲಿ 400ಕ್ಕೂ ಹೆಚ್ಚು ಅಫಾಡವಿಟ್ ಗಳನ್ನು ಕೊಡಲಾಗಿದೆ.  60 ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ.  ಕಳೆದ ಹಲವು ವರ್ಷಗಳಲ್ಲಿ 47ಕ್ಕೂ ಹೆಚ್ಚು ಮಧ್ಯಂತರ ಆಜ್ಞೆಗಳನ್ನು ಹೊರಡಿಸಲಾಗಿದೆ.  ಹೆಚ್ಚು ಕಡಿಮೆ ಪ್ರತೀ ಯೋಜನೆಯ ಜಾರಿ ಬಗ್ಗೆ ವಿವರವಾದ ನಿರ್ದೇಶನಗಳನ್ನು ಕೋರ್ಟು ಆದೇಶ ರೂಪದಲ್ಲಿ ನೀಡಿದೆ.  ಇದು ಕಾನೂನಿನಷ್ಟೇ ಬಲ ಹೊಂದಿದೆ. ಇಂತಹ ಆದೇಶಗಳಲ್ಲಿ ಎರಡು ಪ್ರಕಾರಗಳಿವೆ. ಒಂದು ಪ್ರಕಾರ - ಈ ಮೇಲೆ ಹೇಳಿದ ಎಂಟೂ ಯೋಜನೆಗಳಿಗೆ ಅನ್ವಯವಾಗುವ ಸಾಮಾನ್ಯ ಆದೇಶಗಳು. ಇವನ್ನು 'ಅಂಬ್ರೆಲ್ಲಾ ಆರ್ಡರ್'ಗಳು ಎಂದೂ ಕರೆಯಲಾಗಿದೆ. ಎರಡನೇಯದು ಒಂದು ನಿರ್ದಿಷ್ಟ ಯೋಜನೆಗೆ ಅನ್ವಯವಾಗುವ ಆದೇಶಗಳು.

ಸಾಮಾನ್ಯ ಮತ್ತು ರೇಶನ್ ವ್ಯವಸ್ಥೆಗೆ ಅನ್ವಯವಾಗುವ ನಿದರ್ಿಷ್ಟ ಆದೇಶಗಳನ್ನು ಈ ಕೆಳಗೆ ಕೊಡಲಾಗಿದೆ. ರೇಶನ್ ಅವ್ಯವಸ್ಥೆಯ ಬಗ್ಗೆ ನಡೆಯುತ್ತಿರುವ ಎರಡನೇ ಹಂತದ ತೀವ್ರ ಚಳುವಳಿಯಲ್ಲಿ ಈ ಆದೇಶಗಳ ಬಗ್ಗೆ ತಿಳುವಳಿಕೆ ಹೋರಾಟದ ಆಯುಧಗಳಾಗಬಲ್ಲವು. ಈ ಆದೇಶಗಳ ಜಾರಿಗೆ ಒತ್ತಾಯ ಸರ್ಕಾರೀ ಯಂತ್ರದ ಮೇಲೆ ಪರಿಣಾಮಕಾರಿ ಆಗಬಲ್ಲವು.

ಸಾಮಾನ್ಯ ಆದೇಶಗಳು

1.    ಜಾರಿಯ ಜವಾಬ್ದಾರಿ : ಯಾವುದೇ 'ಆದೇಶದ ಜಾರಿಯಲ್ಲಿ ಸತತ ಚ್ಯುತಿ' ಕಂಡು ಬಂದರೆ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಅದಕ್ಕೆ ಜವಾಬದ್ದಾರನನ್ನಾಗಿ ಮಾಡಲಾಗುವುದು.
2.    ಗ್ರಾಮ ಸಭಾದ ಜವಾಬ್ದಾರಿ : ಗ್ರಾಮ ಸಬಾಗಳು ಎಲ್ಲಾ ಆಹಾರ ಮತ್ತು ಉದ್ಯೋಗ ಸಂಬಂಧಿತ ಯೋಜನೆಗಳ ಸಾಮಾಜಿಕ ಆಡಿಟ್ ನಡೆಸುವ ಹಕ್ಕು ಹೊಂದಿರುತ್ತವೆ. ಇಂತಹ ಆಡಿಟ್ ಗಳಲ್ಲಿ ಕಂಡು ಬಂದ ಹಣದ ದುವ್ರ್ಯಯದ ಪ್ರಕರಣಗಳ ಬಗ್ಗೆ ಸಂಬಂಧ ಪಟ್ಟ ಜಾರಿ ಮಾಡುವ ಅಧಿಕಾರಿಗಳಿಗೆ ವರದಿ ನಿಡಬೇಕು. ಆ ಅಧಿಕಾರಿಗಳು ಇಂತಹ ದೂರುಗಳ ಬಗ್ಗೆ ಕಾನೂನಿನಂತೆ ಕ್ರಮ ಕೈಗೊಳ್ಳಬೇಕು.
3.    ಮಾಹಿತಿ ಪಡೆಯುವ ಅಧಿಕಾರ  : ಗ್ರಾಮ ಸಭಾಗಳು ಈ ಯೋಜನೆಗಳ ಜಾರಿಯ ಮೇಲ್ವಿಚಾರಣೆ ಮಾಡುವ ಮತ್ತು ಜಾರಿ ಬಗ್ಗೆ ಇರುವ ಎಲ್ಲಾ ಮಾಹಿತಿಗಳನ್ನು ಪಡೆಯುವ ಅಧಿಕಾರ ಹೊಂದಿರುತ್ತವೆ.  ಯೋಜನೆಯ ಫಲಾನುಭವಿಗಳನ್ನು ನಿರ್ಧರಿಸುವ ಮತ್ತು ಆ ಸವಲತ್ತುಗಳನ್ನು ಹಂಚುವುದು ಇದರಲ್ಲಿ ಸೇರಿರುತ್ತದೆ
4.    ಕೋರ್ಟಿನ ಆದೇಶಗಳ ಬಗ್ಗೆ ಮಾಹಿತಿ : ಸುಪ್ರೀ ಕೋರ್ಟಿನ ನವೆಂಬರ್ 28, 2001 ಮತ್ತು ಮೇ 8, 2002 ದಿನಾಂಕದ ಆಹಾರದ ಹಕ್ಕಿನ ಬಗೆಗಿನ ಆದೇಶಗಳನ್ನು ಭಾಷಾಂತರಿಸಿ ಗ್ರಾಮ ಪಂಚಾಯತ್, ಶಾಲಾ ಮತ್ತು ರೇಶನ್ ಅಂಗಡಿಗಳಲ್ಲಿ ಶಾಶ್ವತವಾಗಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು.  ಕೇಂದ್ರ ಸರ್ಕಾರ ಆಕಾಶವಾಣಿ ಮತ್ತು ದೂರದರ್ಶನಗಳ ಮೂಲಕವೂ ಈ ಆದೇಶಗಳ ಬಗ್ಗೆ 'ವ್ಯಾಪಕ ಪ್ರಚಾರ'  ಕೊಡಬೇಕು.
5.    ಎಂಟು ಆಹಾರ ಸಂಬಂಧಿತ ಯೋಜನೆಗಳನ್ನು ನಿಲ್ಲಿಸಬಾರದು : 'ಈ ಕೋರ್ಟಿನ ಅನುಮತಿ ಪಡೆಯದೆ ಈ ಆದೇಶಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಯೋಜನೆಗಳನ್ನು..ನಿಲ್ಲಿಸಬಾರದು ಮತ್ತು ಯಾವುದೇ ರೀತಿಯಲ್ಲಿ ಕಡಿತ ಅಥವಾ ಮಿತಿಗೊಳಿಸಬಾರದು'.
6.    ಆಹಾರ ಧಾನ್ಯಗಳ ಕೋಟಾದ ಪೂರ್ಣ ಉಪಯೋಗ : ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನ್ವಯ ಮಂಜೂರು ಮಾಡುವ ಆಹಾರ ಧಾನ್ಯಗಳನ್ನು ಕಡ್ಡಾಯವಾಗಿ ಪಡೆದು ಅದೇ ಯೋಜನೆಯ  ಭಾಗವಾಗಿ ಹಂಚಬೇಕು.
7.    ಆಹಾರದ ಹಕ್ಕು ಪ್ರಕರಣಗಳಲ್ಲಿ ಹೈ ಕೋರ್ಟುಗಳ ಪಾತ್ರ : ಆಹಾರದ ಹಕ್ಕು ಸಂಬಂಧಿತ ಅರ್ಜಿಗಳನ್ನು ರಾಜ್ಯದ ಹೈಕೊರ್ಟಿನ ಮುಂದೆ ಮಂಡಿಸಬಹುದು. ಹೈ ಕೋರ್ಟು 'ಆಹಾರದ ಹಕ್ಕು ಪ್ರಕರಣ' ಸುಪ್ರೀಂ ಕೋರ್ಟಿನ ಮುಂದೆ ಇರುವುದರಿಂದ ಇಂತಹ ಅರ್ಜಿಗಳನ್ನು ತಡೆ ಹಿಡಿಯದೆ, ಅವುಗಳನ್ನು ಪರಿಶೀಲಿಸಿ ಸೂಕ್ತ ತೀರ್ಪು ಕೊಡಬೇಕು.

ರೇಶನ್ ಸಂಬಂಧಿತ ನಿರ್ದಿಷ್ಟ ಆದೇಶಗಳು :

ಗುರಿ-ನಿಧರ್ಾರಿತ ರೇಶನ್ ವ್ಯವಸ್ಥೆ ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಲ್ಲದೆ ಸೋರಿಕೆ ಮತ್ತು ಭ್ರಷ್ಟಾಚಾರದ ಗಂಭಿರ ಸಮಸ್ಯೆಗಳನ್ನು ಎದುರಿಸುತ್ತಿದೆ. ಸುಪ್ರೀಂ ಕೋರ್ಟು ಇವನ್ನು ಗಮನದಲ್ಲಿ ಇಟ್ಟುಕೊಂಡು ತನ್ನ ಜುಲೈ 12, 2006 ರ ಆದೇಶದ ಮೂಲಕ ಕೇಂದ್ರೀಯ ಜಾಗರೂಕತಾ ಸಮಿತಿ ರಚಿಸಿದೆ. ನಿವೃತ್ತ ನ್ಯಾಯಾಧೀಶ ಡಿ.ಪಿ.ವಾಧ್ವಾ ರ ಅಧ್ಯಕ್ಷತೆಯಲ್ಲಿ ಸುಪ್ರೀಂ ಕೋಟರ್ು ಕಮಿಶನರ್ ಆದ ಡಾ.ಎನ್.ಸಿ.ಸಕ್ಸೇನಾರು ಸಂಚಾಲಕ-ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದೆ. ಈ ಜಾಗರೂಕತಾ ಸಮಿತಿ ಅಗಸ್ಟ್ 2007 ರಲ್ಲಿ ಸಲ್ಲಿಸಿದ ವರದಿಯನ್ನು ಸುಪ್ರೀಂ ಕೋರ್ಟು ಪರಿಶೀಲಿಸುತ್ತಿದೆ. ಈ ಕೆಳಗಿನ ನಿರ್ದಿಷ್ಟ ಆದೇಶಗಳನ್ನು ರೇಶನ್ ವ್ಯವಸ್ಥೆ ಬಗ್ಗೆ ಹೊರಡಿಸಿದೆ :

1.    ಬಿಪಿಎಲ್ ಕುಟುಂಬಗಳ ಗುರುತಿಸುವಿಕೆ : ಎಲ್ಲಾ ರಾಜ್ಯ ಸರ್ಕಾರಗಳು ಜನವರಿ 1, 2002 ರೊಳಗಾಗಿ ಬಿಪಿಎಲ್ ಕುಟುಂಬಗಳನ್ನು ಗುರುತಿಸುವ, ರೇಶನ್ ಕಾರ್ಡು ವಿತರಿಸುವ ಮತ್ತು 35 ಕೆಜಿ ಆಹಾರ ಧಾನ್ಯ ವಿತರಿಸಲು ಆರಂಭಿಸುವ ಕೆಲಸ ಕಡ್ಡಾಯವಾಗಿ ಮುಗಿಸಬೇಕು.
2.    ಬಿಪಿಎಲ್ ಪಟ್ಟಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಪಿಎಲ್ ಕುಟುಂಬಗಳ ಗುರುತಿಸುವಿಕೆಯ ಬಗ್ಗೆ ಸುಪ್ರೀಂ ಕೋರ್ಟಿನ ಕಮಿಶನರ್ ಗಳ ಜತೆ ಸಮಾಲೋಚನೆ ನಡೆಸಿ ಸ್ಪಷ್ಟ ಮಾರ್ಗದರ್ಶನಗಳನ್ನು ರೂಪಿಸಬೇಕು.  ಯಾರನ್ನೆ ಆಗಲಿ ಯಾವುದೇ ಕಾರಣಕ್ಕೆ ಕೋಟರ್ಿನ ಅನುಮತಿ ಇಲ್ಲದೆ ಬಿಪಿಎಲ್ ಪಟ್ಟಿಯಿಂದ ತೆಗೆಯಬಾರದು.
3.    ರೇಶನ್ ಅಂಗಡಿಗಳ ಮತ್ತು ಆಹಾರ ಧಾನ್ಯಗಳ ಲಭ್ಯತೆ : ಎಲ್ಲಾ ರೇಶನ್ ಅಂಗಡಿಗಳು ಒಂದು ವಾರದೊಳಗೆ (ಮುಚ್ಚಿದ್ದರೆ ಪುನಃ ತೆರೆದು) ಸತತ ಆಹಾರ ಧಾನ್ಯ ವಿತರಿಸುವ ಕೆಲಸದಲ್ಲಿ ತೊಡಗುವಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು. (ಜುಲೈ 23, 2001).. ಎಲ್ಲಾ ರೇಶನ್ ಅಂಗಡಿಗಳು ನಿಗದಿತ ಅವಧಿಯಲ್ಲಿ ತಿಂಗಳ ತುಂಬಾ ತೆರೆದಿರಬೇಕು. ಅಂಗಡಿ ತೆರೆದಿರುವ ಅವಧಿಯನ್ನು ನೋಟೀಸ್ ಬೋರ್ಡಿನಲ್ಲಿ ಸ್ಪಷ್ಟವಾಗಿ ಬರೆಯಬೇಕು.
4.    ರೇಶನ್ ಅಂಗಡಿ ಮಾಲಿಕರ ಜವಾಬ್ದಾರಿ : ಈ ಅಕ್ರಮಗಳನ್ನು ಮಾಡಿದರೆ ರೇಶನ್ ಅಂಗಡಿಗಳ ಲೈಸೆನ್ಸ್ ರದ್ದು ಮಾಡಬೇಕು - (ಅ) ನಿಗದಿತ ಅವಧಿಯಲ್ಲಿ ತಿಂಗಳ ಎಲ್ಲಾ ದಿನಗಳಲ್ಲಿ ಅಂಗಡಿ ತೆರೆಯದೆ ಇರುವುದು; (ಆ) ಬಿಪಿಎಲ್ ಕುಟುಂಬಗಳಿಗೆ ಬಿಪಿಎಲ್ ದರಕ್ಕಿಂತ ಹೆಚ್ಚು ದರದಲ್ಲಿ ಅಥವಾ  ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಹಾರ ಧಾನ್ಯ ನೀಡುವುದು; (ಇ) ಬಿಪಿಎಲ್ ಕಾರ್ಡುಗಳನ್ನು ತಮ್ಮ ಬಳಿ ಇಟ್ಟು ಕೊಳ್ಳುವುದು (ಈ) ಬಿಪಿಎಲ್ ಕಾರ್ಡುಗಳಲ್ಲಿ ಸುಳ್ಳು ದಾಖಲೆ ಮಾಡುವುದು (ಉ) ಆಹಾರ ಧಾನ್ಯಗಳ ಕಾಳಸಂತೆ ಮಾಡುವುದು ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಮಾರುವುದು ಅಥವಾ ತಮ್ಮ ರೇಶನ್ ಅಂಗಡಿಗಳನ್ನು ಬೇರೆ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಕೊಟ್ಟು ಬಿಡುವುದು
5.    ರೇಶನ್ ವ್ಯವಸ್ಥೆಯ ಮೇಲ್ವಿಚಾರಣೆ : ಕೇಂದ್ರೀಯ ಜಾಗರೂಕತಾ ಸಮಿತಿ ಈ ವಿಷಯಗಳ ಬಗ್ಗೆ ನಿಗಾ ವಹಿಸಬೇಕು - (ಅ) ರೇಶನ್ ಅಂಗಡಿ ಲೈಸೆನ್ಸ್ ಕೊಡುವ ವಿಧಾನ (ಆ) ಅಂಗಡಿ ಮಾಲಿಕರಿಗೆ ಕೊಡಬೇಕಾದ ಕಮಿಶನಿನ ದರ ಅಥವಾ ಮೊತ್ತ (ಇ) ಈಗಾಗಲೇ ಇರುವ ಮೇಲ್ವಿಚಾರಣೆ ಸಮಿತಿಗಳ ಕೆಲಸ ಉತ್ತಮ ಪಡಿಸಲು ಕ್ರಮಗಳು (ಈ) ಅಂಗಡಿಗೆ ಕೊಟ್ಟಿರುವ ಆಹಾರ ಧಾನ್ಯಗಳ ಪಾರದರ್ಶಕತೆ ತರುವ ವಿಧಾನಗಳನ್ನು ರೂಪಿಸುವುದು
6.    ಕಂತುಗಳಲ್ಲಿ ಖರೀದಿಗೆ ಅವಕಾಶ : ಬಿಪಿಎಲ್ ಕುಟುಂಬಗಳು ರೇಶನ್ ಧಾನ್ಯಗಳನ್ನು ಕಂತುಗಳಲ್ಲಿ ಖರೀದಿಗೆ ವ್ಯವಸ್ಥೆ ಮಾಡಬೇಕು.
7.    ಬಿಪಿಎಲ್ ಕಾರ್ಡುಗಳ ಬಗ್ಗೆ ಅರಿವು ಮೂಡಿಸುವುದು : ಬಿಪಿಎಲ್ ಕುಟುಂಬಗಳಲ್ಲಿ ತಮಗೆ ರೇಶನ್ ನಲ್ಲಿ ದೊರಕುವ  ಧಾನ್ಯಗಳ ಪ್ರಮಾಣ ಮತ್ತು ದರಗಳ ಬಗ್ಗೆ  ಅರಿವು ಮುಡಿಸಲು ವ್ಯಾಪಕ ಪ್ರಚಾರದ ವ್ಯವಸ್ಥೆ ಮಾಡಬೇಕು.

ರೇಶನ್ ವ್ಯವಸ್ಥೆಯ ಬಗ್ಗೆ ಹೊರಡಿಸಿದ ಆದೇಶಗಳಲ್ಲದೆ ಕೇಂದ್ರ ಸರ್ಕಾರದ ಅಗಸ್ಟ್ 2001 ರ ರೇಶನ್ ಕಂಟ್ರೋಲ್ ಆದೇಶ ಮತ್ತು ಅಗತ್ಯ ಸರಕುಗಳ ಕಾನೂನುಗಳೂ, ರೇಶನ್ ಅಂಗಡಿಗಳ ಮಾಲಕರು, ಆಹಾರ ವಿಭಾಗದ ಮತ್ತಿತರ ಅಧಿಕಾರಿಗಳು ಅಕ್ರಮ ಕರ್ತವ್ಯಲೋಪದ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ  ಸ್ಪಷ್ಟ ನಿರ್ದೇಶನಗಳನ್ನು ಹೊಂದಿದೆ. ಇವನ್ನೂ ಆಹಾರದ ಹಕ್ಕು ಚಳುವಳಿಯ ಕಾರ್ಯಕರ್ತರು ಬಳಸಿಕೊಳ್ಳಬಹುದು. ಇದೇ ರೀತಿ ಅಂತ್ಯೋದಯ ಮತ್ತು ಅನ್ನಪೂರ್ಣ ಯೋಜನೆಗಳ ಬಗೆಗೂ ಸುಪ್ರೀಂ ಕೋರ್ಟು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಈ ಎಲ್ಲಾ ಆದೇಶಗಳ ವಿವರಗಳನ್ನು www.supremecourtcommissioners.org ಎಂಬ ವೆಬ್ ಸೈಟಿನಿಂದ ಪಡೆಯಬಹುದು.

- ಶರತ್ ಚಂದ್ರ

ಸೌಜನ್ಯ: ಜನಶಕ್ತಿ 


Share: