ದುಬೈ, ಫೆಬ್ರವರಿ 22: ಧ್ವನಿ ಪ್ರತಿಷ್ಠಾನವು ತನ್ನ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ "ಕನ್ನಡ ಸಾಹಿತ್ಯ ಸಮ್ಮೇಳನ"ವನ್ನು ದುಬಾಯಿಯಲ್ಲಿ ಆಯೋಜಿಸಿದೆ. ಕನ್ನಡದ ಚರಿತ್ರೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ನಡೆಯುವ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ. ಚೆನ್ನವೀರ ಕಣವಿ ಅವರು ಆಯ್ಕೆಗೊಂಡಿರುವರು.
ಸಮ್ಮೇಳನವು ದುಬಾಯಿ ಜಿಮ್ಸ್ ಪ್ರೈವೆಟ್ ಸ್ಕೂಲ್ ಸಭಾಗೃಹದಲ್ಲಿ ತಾ. 23.04.2010 ಶುಕ್ರವಾರ ಮುಂಜಾನೆ ಗಂಟೆ 10 ರಿಂದ ಸಂಜೆ 6.30ರ ತನಕ ನಡೆಯಲಿದೆ.
ಕನ್ನಡ ಸಾಹಿತ್ಯದ ವಿವಿಧ ನೆಲೆಗಳು ಎಂಬ ವಿಷಯದ ಮೇಲೆ ಎರಡು ಅಪೂರ್ವ ಗೋಷ್ಠಿಗಳು, ಗಲ್ಫ್ ಕನ್ನಡಿಗರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ಕವಿ ಗೋಷ್ಠಿ ನಡೆಯಲಿದೆ. ಕರ್ನಾಟಕದಿಂದ ಆಗಮಿಸಲಿರುವ ಪ್ರಖ್ಯಾತ ಅತಿಥಿ ಕಲಾವಿದರುಗಳು ಅಪೂರ್ವ ಮನರಂಜನೆ ನೀಡಲಿರುವರು. ಸಮ್ಮೇಳನದಲ್ಲಿ ಕರ್ನಾಟಕದಿಂದ ಸಾಹಿತಿಗಳು, ರಾಜಕೀಯ ನಾಯಕರು, ಕಲಾವಿದರು, ಸರಕಾರಿ ಆಧಿಕಾರಿಗಳು ಹಾಗೂ ಇತರ ಗಣ್ಯರು ಆಗಮಿಸಿ ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರವೇಶ ಉಚಿತವಾಗಿದ್ದು. ಊಟೋಪಚಾರವನ್ನು ಉಚಿತವಾಗಿ ನೀಡಲಾಗುವುದು.
ಮುಂಬೈಯಲ್ಲಿ ಸಮಾನ ಮನಸ್ಕ ಯುವಕರು ಹೊರನಾಡಿನಲ್ಲಿ ಕನ್ನಡ ಚಟುವಟಿಕೆಗಳು ನಿಂತ ನೀರಾಗದೆ ಹರಿಯುವ ನದಿಯಾಗ ಬೇಕೆಂಬ ಉದ್ದೇಶದಿಂದ 1985 ರಲ್ಲಿ ಅಸ್ತಿತ್ವಕ್ಕೆ ತಂದ ಧ್ವನಿ ಪ್ರತಿಷ್ಠಾನ ಈಗ ಬೆಳ್ಳಿ ಹಬ್ಬದ ಸಡಗರದಲ್ಲಿದೆ. ಧ್ವನಿ ಸಮಾಜದಲ್ಲಿ ಒಂದು ಸಂಸ್ಥೆಯಾಗಿ ಗುರುತಿಸಿ ಕೊಳ್ಳದೆ ಒಂದು ಸಾಮಾಜಿಕ ಪ್ರಕ್ರಿಯೆ ಯಾಗಬೇಕೆಂಬ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿದ್ದು ಆ ನಿಟ್ಟಿನಲ್ಲಿ ಸತತ ಇಪ್ಪತೈದು ವರ್ಷಗಳಿಂದ ಕನ್ನಡ ಸೇವೆಯನ್ನು ಮಾಡುತ್ತಾ ಬಂದಿದೆ.
ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಅಗಮಿಸಿ ಯಶಸ್ವಿ ಗೊಳಿಸ ಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.
ಸಮ್ಮೇಳನದಲ್ಲಿ ಮನರಂಜನೆ ಕಾರ್ಯಕ್ರಮ ನೀಡಲು ಯು.ಏ.ಇ.ಯಲ್ಲಿರುವ ಎಲ್ಲಾ ಕನ್ನಡಿಗ ಸಂಘಟನೆಗಳಿಗೂ ಅವಕಾಶ ಕಲ್ಪಿಸಲಾಗುವುದು.
ಆಸಕ್ತ ಸಂಘಟನೆಗಳು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಲು ವಿನಂತಿಸಿಕೊಳ್ಳಲಾಗಿದೆ.:
ಜಯರಾಮ ಸೋಮಯಾಜಿ: 0507952930, ಮುರುಗೇಶ್ ಗಾಜರೆ:0507256594, ಅನಂದ ಬೈಲೂರ್: 050 -982189, ಸಂಪತ್ ಶೆಟ್ಟಿ: 050 9376796, ಡೊನಾಲ್ಡ್ ಕೊರಿಯ: 050 6941572, ಶ್ರೀಮತಿ ಸರಳಾ ರಘು ಪ್ರಸಾದ್: 050 2242033, ಮಧುಸೂದನ್ : 050 7643774, ದಾಸ್: 0507576238 ಅಥವಾ ಇ ಮೈಲ್ dhwani_prathistana @ yahoo.com ಮೂಲಕ ಕೂಡಾ ಸಂಪರ್ಕಿಸಬಹುದಾಗಿದೆ.