ಬಂಟ್ವಾಳ, ಮಾರ್ಚ್ 2 :ರಾಷ್ಟ್ರದ ಭಾವೈಕ್ಯತೆ, ಸಮಗ್ರತೆ, ಸಾಮಾಜಿಕ ಸಾಮರಸ್ಯದ ಸುಂದರ ಸಾಮಾಜದ ನಿರ್ಮಾಣದ ಕಲ್ಪನೆಯನ್ನು ಯುವಕರು ಹೊಂದಿರಬೇಕು. ತಪ್ಪು ದಾರಿ ಹಿಡಿಯದೇ ಶೃದ್ಧೆ, ಶ್ರಮದಿಂದ ಕೆಲಸ ಮಾಡಿ ಉನ್ನತಿಗೇರಬೇಕು. ಪ್ರತಿಭೆಯ ಸರಿಯಾದ ಉಪಯೋಗವಾಗಬೇಕು. ಈ ನಿಟ್ಟಿನಲ್ಲಿ ಯುವಜನ ಮೇಳಗಳು ಸ್ಪೂರ್ತಿ ನೀಡುವ ವೇದಿಕೆಯಾಗಬೇಕು ಎಂದು ಬಂಟ್ವಾಳ ಶಾಸಕ ಬಿ. ರಮಾನಾಥ ರೈ ಹೇಳಿದರು.
ಕುಕ್ಕಿಪಾಡಿ ಸಂತ ಬಾರ್ತಲೋಮಿಯಂ ಹಿ.ಪ್ರಾ. ಶಾಲೆಯಲ್ಲಿ ಜರಗಿದ ಬಂಟ್ವಾಳ ತಾಲೂಕು ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ವಹಿಸಿದ್ದರು. ಯಜಮಾನ ಸಮೂಹ ಸಂಸ್ಥೆಯ ಮಾಲಕ ವರದರಾಜ ಪೈ, ದ.ಕ. ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಗಣೇಶ್ ಅಮ್ಟೂರು, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ತಾಲೂಕು ಯುವ ಜನ ಒಕ್ಕೂಟದ ಸಲಹೆಗಾರ ಕೆ.ಎಚ್. ಅಬೂಬಕ್ಕರ್, ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಸಂತರಾಜ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಅಂಬ್ರೋಸ್ ವಾಲ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಯುವಜನ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಸ್ವಾಗತಿಸಿ, ಅಶೋಕ್ ಹಲಾಯಿ ವಂದಿಸಿದರು. ಪತ್ರಕರ್ತ ಮೋಹನ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.
ದ.ಕ. ಜಿಲ್ಲಾ ಪಂಚಾಯತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಬಂಟ್ವಾಳ ಗ್ರಾ.ಪಂ. ಕುಕ್ಕಿಪಾಡಿ, ಶ್ರೀ ಕ್ಷೇ.ಧ.ಗ್ರಾ.ಯೋ. ಬಂಟ್ವಾಳ, ಯುವಜನ ಒಕ್ಕೂಟ, ಎ.ಸಿ.ಸಿ. ಲಿಮಿಟೆಡ್ ಮಂಗಳೂರು ಮತ್ತು ಕುಕ್ಕಿಪಾಡಿ ಅರುಣೋದಯ ಯುವಕಮಂಡಲದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.