ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ : ರೈಲ್ವೆ ಸಮಿತಿ ಸಭೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಜಟಾಪಟಿ.

ಕಾರವಾರ : ರೈಲ್ವೆ ಸಮಿತಿ ಸಭೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಜಟಾಪಟಿ.

Thu, 29 Sep 2022 04:25:18  Office Staff   SO News

ಕಾರವಾರ : ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಸಂಬಂಧ ಬುಧವಾರ ಕರೆದ  ಸಾರ್ವಜನಿಕ ಅಹವಾಲು ಸಭೆಯಲ್ಲಿ  ಹಾಲಿ ಮತ್ತು  ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ಉಂಟಾದ   ಘಟನೆ  ನಡೆದಿದೆ.

ಕಾರವಾರದ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ರೈಲ್ವೇ ಯೋಜನಾ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆ ನಡೆಯುತ್ತಿದ್ದ ವೇಳೆಯೇ ಮದ್ಯ ಪ್ರವೇಶಿಸಿದ ಸತೀಶ್ ಸೈಲ್ ಸಭೆಯನ್ನ ತೆರೆದ ಸ್ಥಳದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನಡೆಸುವಂತೆ ಆಗ್ರಹಿಸಿದರು. ಈ ವೇಳೆ ಮಾಜಿ ಶಾಸಕರನ್ನ ಸಮಾಧಾನಪಡಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಯತ್ನಿಸಿದರು.  ಸಾಕಷ್ಟು ಸಂಖ್ಯೆಯಲ್ಲಿ ಸಂಘಟನೆಗಳು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿರುವ ಹಿನ್ನಲೆ ಒಬ್ಬರಾದ ಮೇಲೆ ಒಬ್ಬರನ್ನು ಕರೆದು ಅಹವಾಲು ಸ್ವೀಕರಿಸೋದಾಗಿ ತಿಳಿಸಿದರು. ಆದರೆ ಇದಕ್ಕೆ ಸುಮ್ಮನಾಗದಿದ್ದಾಗ ಶಾಸಕಿ ರೂಪಾಲಿ ನಾಯ್ಕ ಸತೀಶ್ ಸೈಲ್‌ರಿಗೆ ಸಭೆಗೆ ಅಡ್ಡಿಪಡಿಸದಂತೆ ಆಕ್ರೋಶ ವ್ಯಕ್ತಪಡಿಸಿದರು.

 ಪ್ರತಿಬಾರಿ ವಿವಿಧ ಯೋಜನೆಗಳ ಸಾರ್ವಜನಿಕ ಅಹವಾಲು ಸಭೆಗಳಲ್ಲಿ ಇದೇ ರೀತಿ ಅಡ್ಡಿಪಡಿಸುವುದು ಸರಿಯಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಹಾಲಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನ ಒಳಗೆ ಕರೆಯದೇ ಸಭೆ ನಡೆಸದಂತೆ ಸತೀಶ ಸೈಲ್ ಪಟ್ಟು ಹಿಡಿದರು. ಹೀಗಾಗಿ  ಜಿಲ್ಲಾಧಿಕಾರಿಗಳು ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಿದರು..

ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಸಾರ್ವಜನಿಕರನ್ನು ಒಳಗೆ ಕರೆದು ಸಭೆ ನಡೆಸಿದರು.


Share: