ಬಂಟ್ವಾಳ, ಜನವರಿ 20:ಅಂಬೇಡ್ಕರ್,ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮುಂದಿಟ್ಟುಕೊಂಡು ನಾವು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಬುಧವಾರ ಕಲ್ಲಡ್ಕ ಹಾಗೂ ಬೊಂಡಾಲದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆದ ನೂತನ ಕುಟೀರಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರದ್ಧೆ,ಆಸಕ್ತಿ, ಛಲ ಬೆಳೆಸಿಕೊಂಡರೆ ವ್ಯಕ್ತಿ ಏನೂ ಆಗಬಹುದು ಎಂಬುದಕ್ಕೆ ನಾನೇ ಉದಾಹರಣೆ ಎಂದ ಅವರು,ಶ್ರೀ ರಾಮ ವಿದ್ಯಾಕೇಂದ್ರದ ಸಂಸ್ಕಾರ ಭರಿತ ಶಿಕ್ಷಣ,ವಾತಾವರಣ ನನಗೆ ಖುಷಿ ತಂದಿದೆ,ನನ್ನಲ್ಲಿ ಪರಿವರ್ತನೆ ತಂದಿದೆ ಎಂದರು.
ಹೊಸ್ಮಾರು ಬಲ್ಯೊಟ್ಟು ಮಠದ ವಿಖ್ಯಾತಾನಂದ ಸ್ವಾಮೀಜಿ ನೂತನ ಕುಠೀರಗಳನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಬೆಳ್ತಂಗಡಿ ಪ್ರಸನ್ನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ ಗೌಡ,ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ,ಪುರಸಭಾಧ್ಯಕ್ಷೆ ಬಿ.ಯಶೋಧ ಮೊದಲಾದವರು ವೇದಿಕೆಯಲ್ಲಿದ್ದರು.ಕೇಂದ್ರದ ಕಾರ್‍ಯದರ್ಶಿ ಡಾ.ಪ್ರಭಾಕರ ಭಟ್ ಸ್ವಾಗತಿಸಿದರು.ರಾಧಾಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರ್ವಹಿಸಿದರು.