ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸೀ ವೇವ್ ಬ್ರೇಕಸ್೯ ತಂತ್ರಜ್ಞಾನ ಅಳವಡಿಕೆ: ಸಿ.ಎಂ ಬಸವರಾಜ ಬೊಮ್ಮಾಯಿ

ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸೀ ವೇವ್ ಬ್ರೇಕಸ್೯ ತಂತ್ರಜ್ಞಾನ ಅಳವಡಿಕೆ: ಸಿ.ಎಂ ಬಸವರಾಜ ಬೊಮ್ಮಾಯಿ

Thu, 14 Jul 2022 17:53:41  Office Staff   SO News

ಮಂಗಳೂರು: ಕರಾವಳಿಯಲ್ಲಿ ಉಂಟಾಗುವ ಕಡಲಕೊರೆತ ತಡೆಗೆ ಬಟ್ಟಪಾಡಿಯಲ್ಲಿ ಸೀ ವೇವ್ ಬ್ರೇಕಸ್೯ ಎಂಬ ನೂತನ ತಂತ್ರಜ್ಞಾನವನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು  ಮಂಗಳೂರು ನಗರದ ಹೊರವಲಯದಲ್ಲಿರುವ ಉಳ್ಳಾಲದ ಬಟ್ಟಪಾಡಿ ಕಡಲ ತೀರದಲ್ಲಿ ಎದುರಾಗಿರುವ ಕಡಲ್ಕೊರೆತದ ಸ್ಥಿತಿಗತಿಗಳನ್ನು ಮಳೆಯ ನಡುವೆಯೇ ಪರಿಶೀಲಿಸಿ, ವರದಿಗಾರರೊಂದಿಗೆ ಮಾತನಾಡಿದರು.

ಉಳ್ಳಾಲದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ  ಕಡಲ್ಕೊರೆತ ಆಗಿದೆ, ಬಟ್ಟಪಾಡಿಯಲ್ಲಿ ಕಡಲ್ಕೊರೆತ ತಡೆಗೆ ಹೊಸ ತಂತ್ರಜ್ಞಾನ ಸೀ ವೇವ್ ಬ್ರೇಕರ್ಸ್ ಅನ್ನು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಅಳವಡಿಸಲಾಗುವುದು, ಕಡಲ ಅಲೆಗಳನ್ನು ಬ್ರೆಕ್ ಮಾಡುವ ವ್ಯವಸ್ಥೆಗಳನ್ನು ಅದು ಒಳಗೊಂಡಿರುತ್ತದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ್ಕೊರೆತ ಸಮಸ್ಯೆಯಿದ್ದು, ಅದರ ತಡೆಗೆ ಎಡಿಬಿಯಿಂದ ಕೈಗೊಳ್ಳಲಾದ ಕಾಮಗಾರಿ ಸರಿಯಾಗಿಲ್ಲ ಎಂಬ ಆರೋಪವಿದೆ ಎಂದ ಅವರು, ಕಡಲ್ಕೊರೆತದಿಂದ ರಸ್ತೆ ಸಂಪರ್ಕ ಕಡಿತ ಆದಲ್ಲಿ ತಾತ್ಕಾಲಿಕವಾಗಿ ಜನರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದರು.

ಮುಂದಿನ ತಿಂಗಳ ಮಳೆ ಹೆಚ್ಚಾದ್ರೆ ಇನ್ನಷ್ಟು ಹಾನಿಯಾಗಬಹುದು, ಕಡಲ ಪಕ್ಕದಲ್ಲಿ ಅಪಾಯದಲ್ಲಿರುವ ಮನೆಯವರನ್ನು ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ, ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದರು.

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಹಾನಿಯನ್ನು ಇಂದು ವೀಕ್ಷಿಸಲಾಯಿತು, ಸುಳ್ಯದಲ್ಲಿ ಭೂ ಕಂಪನದಿಂದ ಹಾನಿಯಾದ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ, ಭೂ ಕಂಪನದಿಂದ ಸಾಕಷ್ಟು ಪರಿಣಾಮವುಂಟಾಗಿದೆ, ಭೂ ಕಂಪನದ ಬಗ್ಗೆ ಅಧ್ಯಯನಕ್ಕೆ ಮೂರು- ನಾಲ್ಕು ಸಂಸ್ಥೆಗಳು ಸೇರಿದಂತೆ ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯಕ್ಕೆ ತಿಳಿಸಲಾಗಿದ್ದು, ಅವರು ಅಧ್ಯಯನ ಮಾಡಿ‌ ಸಲಹೆ ಕೊಟ್ಟರೆ ಕ್ರಮ ತೆಗೆದುಕೊಳ್ಳಲಾಗುವುದು, ಈ ಸೆಸ್ಮಿಕ್ ಝೋನ್ ನಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಕೆಲವೊಂದು ವಿದ್ಯಾಮಾನಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ 40 ಕೋಟಿ ರೂ‌.ಗಳ ಅನುದಾನ ನೀಡಿದೆ, ಅದನ್ನು ಸಂಪೂರ್ಣವಾಗಿ ಬಳಕೆ ಮಾಡಿ ಸಂಪೂರ್ಣ ಅಧ್ಯಯನ ಮಾಡಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲಾಗುವುದು, ಉಪ್ಪಿನಂಗಡಿಯಲ್ಲಿ ನದಿಗಳ ಸಂಗಮ ಪ್ರದೇಶದಲ್ಲಿ ತೋಟಗಳಿಗೆ ಹಾನಿ ಆಗಿದೆ ಎಂದು ತಿಳಿಸಿದರು.

 ಕಂದಾಯ ಸಚಿವ ಆರ್‌. ಅಶೋಕ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರಿದ್ದರು.


Share: