ಭಟ್ಕಳ, ನವೆಂಬರ್ ೧೧: ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಮೇಲೆ ಹೊರಿಸಲಾಗಿರುವ ಒತ್ತಡವನ್ನು ನಿವಾರಿಸಿ ಶೈಕ್ಷಣಿಕ ಪ್ರಗತಿಯನ್ನು ಚುರುಕುಗೊಳಿಸಲು ಕ್ಲಸ್ಟರ್ ಸಹಾಯಕ ಶಿಕ್ಷಣಾಧಿಕಾರಿಗಳ ಹುದ್ದೆಯನ್ನು ರದ್ದುಗೊಳಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಭಟ್ಕಳ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಲು ಭಟ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಏಕಕಾಲದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರ ಹಾಗೂ ಪ್ರಾಥಮಿಕ ಶಾಲಾ ವಿವಿಧ ಯೋಜನೆಗಳ ಅನುಷ್ಠಾನ ಜವಾಬ್ದಾರಿಯನ್ನು ಹೊರುವುದು ಸಮಂಜಸವಲ್ಲ ಎಂದ ಸಚಿವರು ಪ್ರಾಥಮಿಕ ಶಾಲಾ ಶಿಕ್ಷಕರ ವೇತನ, ಶಾಲಾ ಸಂದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕ್ಲಸ್ಟರ್ ಸಹಾಯಕ ಶಿಕ್ಷಣಾಧಿಕಾರಿಗಳು ತಮನ್ನು ತೊಡಗಿಸಿಕೊಳ್ಳುವುದರಿಂದ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆ ಎರಡರಲ್ಲೂ ನಿರೀಕ್ಷಿಸಿದ ಯಶಸ್ಸು ಪಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ವಿವರಿಸಿದರು.