ಹೊನ್ನಾವರ:ಬೇಲಿಗೆ ಹಾಕಲಾಗಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾಸುಕಲ್ಮಕ್ಕಿ ಗ್ರಾಮದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಜಮೀನಿನಲ್ಲಿ ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸುವ ಉದ್ದೇಶದಿಂದ ಬೇಲಿಯಲ್ಲಿ ಉರುಳು ಹಾಕಲಾಗಿತ್ತು. ಆದ್ರೆ ದುರದೃಷ್ಟವಶಾತ್ ಉರುಳಿಗೆ ಚಿರತೆ ಸಿಲುಕಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ.
ಸ್ಥಳಕ್ಕೆ ಡಿಎಫ್‌ಓ ರವಿಶಂಕರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಒಂದು ವರ್ಷದ ಹೆಣ್ಣು ಚಿರತೆ ಎಂದು ತಿಳಿದುಬಂದಿದೆ. ಕಾಡು ಪ್ರಾಣಿಗಳನ್ನು ತಡೆಗಟ್ಟಲು ಉರುಳು ಹಾಕಿದ್ದವರ ವಿರುದ್ಧ ಪ್ರಕರಣ ದಾಖಲಿಸೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಮುಗ್ವಾ, ಹೊಸಾಕುಳಿ, ಸಾಲ್ಕೋಡ್ ಭಾಗದಲ್ಲಿ ಈ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಅಲ್ಲದೇ ನಾಯಿ ಆಕಳುಗಳನ್ನು ಭೇಟಿಯಾಡಿದ್ದು ಕಾಡು ಪ್ರಾಣಿಗಳನ್ನು ನಿಯಂತ್ರಣ ಮಾಡುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಇದೀಗ ಮರಿ ಚಿರತೆ ಮೃತಪಟ್ಟಿದ್ದರೂ ಸಾರ್ವಜನಿಕರಲ್ಲಿ ಆತಂಕ ದೂರವಾಗಿಲ್ಲ. ಅಧಿಕಾರಿಗಳು ಕಾಡಿನಿಂದ ನಾಡಿನತ್ತ ಮುಖ ಮಾಡುವ ಪ್ರಾಣಿಗಳನ್ನು ಪುನಃ ಕಾಡಿಗೆ ಕಳುಹಿಸುವ ಕೆಲಸವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.