ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 2022ನೇ ವರ್ಷದಲ್ಲಿ ಜಿಲ್ಲೆಯ ಪ್ರವಾಸಕ್ಕೆ ಬಂದು ಅಪಾಯದಲ್ಲಿ ಸಿಲುಕಿದ್ದ 95 ಜನರನ್ನು ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ.
ಸಾಲು ಸಾಲು ಕಡಲ ತೀರಗಳು, ಜಲಪಾತಗಳು ಹಾಗೂ ನದಿಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ 2022ನೇ ವರ್ಷದಲ್ಲಿ ದಾಖಲೆ ಪ್ರವಾಸಿಗರಿಗೆ ಆತಿಥ್ಯ ನೀಡಿದೆ. ಅದರಲ್ಲಿ ಜಿಲ್ಲೆಯ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಮುನ್ನುಗ್ಗುವ ಭರದಲ್ಲಿ ಅಪಾಯಕ್ಕೆ ಸಿಲುಕುವವರು ಬಹಳ ಜನ. ಹೀಗೆ ಅಪಾಯಕ್ಕೆ ಸಿಲುಕಿದ 95 ಜೀವಗಳಿಗೆ ಮರು ಜೀವ ನೀಡಲಾಗಿದೆ ಎನ್ನುವುದೂ ಕುತೂಹಲದ ವಿಷಯ. ಕೆಲವರು ಮಾತ್ರ ರಕ್ಷಣೆಗೂ ಸಿಗದೇ ಜೀವ ಕಳೆದುಕೊಂಡಿದ್ದಾರೆ.
ಉತ್ತರ ಕನ್ನಡದಲ್ಲಿ ಲೈಫ್‌ಗಾರ್ಡ್‌ಗಳಿಂದ ಪ್ರವಾಸಿಗರು ಸೇಫ್..! 3 ವರ್ಷದಲ್ಲಿ ನೂರಾರು ಜನರ ರಕ್ಷಣೆ
ಕೋವಿಡ್ ಭೀತಿ ಕಳೆದ ಮೇಲೆ ಉತ್ತರ ಕನ್ನಡ ಜಿಲ್ಲೆಗೆ ವ್ಯಾಪಕವಾಗಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಂಥ ಪ್ರವಾಸಿಗರ ಸಂಖ್ಯೆ ಒಂದು ಕೋಟಿ ದಾಟಿದೆ ಎನ್ನುವುದು ಜಿಲ್ಲೆಯ ಸಾರ್ವಕಾಲಿಕ ದಾಖಲೆಯೂ ಆಗಿದೆ. ಈ ಮಧ್ಯೆ ಅಕಾಲಿಕ ಮಳೆ, ಚಂಡಮಾರುತದ ಕಾರಣಕ್ಕೆ ಕಡಲು, ಜಲಪಾತ ಶಾಂತವಾಗುವ ಮೊದಲೇ ನೀರಿಗಿಳಿದ ಪ್ರವಾಸಿಗರು ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ.
ಪ್ರವಾಸಿಗರಿಗೆ ನೀರಿನ ಆಕರ್ಷಣೆ ಸಹಜ. ಅದೇ ಕಾರಣಕ್ಕೆ ಮುನ್ನೆಚ್ಚರಿಕೆ, ಜಾಗೃತಿ ಇಲ್ಲದೇ ನೀರಿನಲ್ಲಿ ಇಳಿದು ಅಪಾಯಕ್ಕೆ ಈಡಾಗುತ್ತಾರೆ. ಹೀಗಾಗಿಯೇ ಜಿಲ್ಲಾಡಳಿತವು ಜಲಪಾತ ಹಾಗೂ ಕಡಲ ತೀರಗಳಲ್ಲಿ ಲೈಫ್ ಗಾರ್ಡ್‌ಗಳನ್ನು ನೇಮಿಸಿದೆ. ಈ ವರ್ಷ ನಿರೀಕ್ಷೆಗಿಂತ ಹೆಚ್ಚಿನ ಪ್ರವಾಸಿಗರು ಬಂದಿದ್ದರಿಂದ ಲೈಫ್ ಗಾರ್ಡ್‌ಗಳಿಗೂ ಹೆಚ್ಚಿನ ಪ್ರಮಾಣದ ಕೆಲಸ ಬಂದಿತು. ಅನೇಕ ಪ್ರವಾಸಿಗರು ಲೈಫ್‌ಗಾರ್ಡ್‌ಗಳ ಆಸರೆಯಿಂದ ಪಾರಾದರೆ, ಇನ್ನು ಕೆಲವರಿಗೆ ಸ್ಥಳೀಯರೂ ನೆರವಾಗಿದ್ದಾರೆ.
ಮುರುಡೇಶ್ವರವೇ ಹೆಚ್ಚು
ಕಾರವಾರದ ಟ್ಯಾಗೋರ್ ಕಡಲ ತೀರ, ಗೋಕರ್ಣ, ಓಂ ಬೀಚ್, ಕುಮಟಾ, ಅಪ್ಸರಕೊಂಡ ಹಾಗೂ ಮುರಡೇಶ್ವರ ಬೀಚ್‌ಗಳಲ್ಲಿಯೇ ಬರೋಬ್ಬರಿ 90 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಮುರಡೇಶ್ವರ ಬೀಚಿನಲ್ಲಿ 54, ಅಂಕೋಲಾ ತಾಲೂಕಿನ ವಿಭೂತಿ ಜಲಪಾತ ಹಾಗೂ ಸಿದ್ದಾಪುರ ತಾಲೂಕಿನ ಬುರುಡೆ ಜಲಪಾತದಲ್ಲಿ 5 ಜನರನ್ನು ರಕ್ಷಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಸಮುದ್ರ ತೀರಗಳ ಮಾಹಿತಿ ಕೊರತೆಯಿಂದ ಪ್ರವಾಸಿಗರು ಅಪಾಯಕ್ಕೆ ಸಿಲುಕುವ ಘಟನೆ ನಡೆಯುತ್ತಿವೆ. ಸಮುದ್ರವು ಮಳೆಗಾಲದಲ್ಲಿ ಅಪಾಯಕಾರಿ ಸ್ಥಳವಾಗುತ್ತದೆ. ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತವೆ. ಮಳೆಗಾಲದ ನಂತರ ಸಮುದ್ರ ಶಾಂತವಾದರೂ ಉಬ್ಬರ, ಇಳಿತ, ಅಲೆಗಳ ವ್ಯತ್ಯಾಸ ಇರುತ್ತದೆ. ಸಮುದ್ರದ ಕಡೆ ಜಾರಿದ ಅಲೆಗಳು ಮರಳಿ ಭೂಮಿಯ ಕಡೆ ನುಗ್ಗುತ್ತವೆ. ಮತ್ತೆ ಸಮುದ್ರದ ಕಡೆ ಜಾರುತ್ತವೆ. ಹಾಗಾಗಿ ಇವನ್ನೆಲ್ಲ ತಿಳಿಯದೇ ಆಳಕ್ಕೆ ಹೋದವರು ಅಪಾಯಕ್ಕೆ ಸಿಲುಕುತ್ತಾರೆ.