ಅಂಕೋಲಾ: 'ಉತ್ತರ ಕನ್ನಡ ಜಿಲ್ಲೆಯನ್ನು ಬೆಳವಣಿಗೆಯ ದೃಷ್ಟಿಯಿಂದ ವಿಭಜನೆ ಮಾಡಬೇಕು' ಎಂದು ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಹೇಳಿಕೆಗೆ ಹಲವರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆ ವಿಭಜನೆ ಕುರಿತು ಜೋಶಿ ಹೇಳಿಕೆ ನೀಡಿದ್ದರು. ಇದಕ್ಕೆ ಸಾಹಿತಿಗಳು, ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಕನ್ನಡದ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಜಿಲ್ಲೆಯ ಜನರು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಈಗಷ್ಟೇ ವಿಭಜನೆಯ ವಿವಾದ ತಣ್ಣಗಾಗಿದೆ. ಮಹೇಶ ಜೋಶಿಯವರು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿ ಮಹಾಂತೇಶ ರೇವಡಿ, 'ಜಿಲ್ಲೆ ವಿಭಜನೆಯ ಮಾತು ಈಗ ಅಪ್ರಸ್ತುತ. ಮಹೇಶ ಜೋಶಿ, ಸಾಹಿತ್ಯ ವೇದಿಕೆಯಲ್ಲಿ ವಿಭಜನೆ ಮಾತು ಆಡಿದ್ದು ಖಂಡನೀಯ. ಇದು ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, 'ಸಾಹಿತ್ಯ ವೇದಿಕೆಯಲ್ಲಿ ಈ ಚರ್ಚೆ ಅಪ್ರಸ್ತುತ. ಜಿಲ್ಲೆ ಆರ್ಥಿಕವಾಗಿ ಇನ್ನೂ ಪ್ರಬಲಗೊಳ್ಳಬೇಕು. ಆ ದಿಸೆಯಲ್ಲಿ ಪ್ರಯತ್ನ ಮುಂದುವರಿಯಬೇಕು' ಎಂದು ಹೇಳಿದರು.
ಸಿ.ಐ.ಟಿ.ಯು ಜಿಲ್ಲಾ ಘಟಕದ ಅಧ್ಯಕ್ಷೆ ಯಮುನಾ ಗಾಂವಕರ, 'ಸಾಹಿತಿಗಳಿಂದ ನಾಡು ಕಟ್ಟುವ ಕಾರ್ಯವಾಗಬೇಕು. ಜಿಲ್ಲೆಯ ಮಲೆನಾಡು, ಮಲೆನಾಡ ಸೆರಗು ಮತ್ತು ಕರಾವಳಿ ಒಗ್ಗೂಡುವಿಕೆಯಿಂದ ಇರುವ ಅನನ್ಯತೆ ಉಳಿಯಬೇಕು. ಕಾರ್ಯಕ್ರಮದಲ್ಲಿ ಸಾಹಿತ್ಯಿಕ ವಿಚಾರ ನಿರೂಪಣೆಯನ್ನು ಕೇಳಲು ಬಂದಿದ್ದೇವೆ ಹೊರತು, ಜಿಲ್ಲೆ ಒಡೆಯುವ ಮಾತು ಕೇಳಲು ಬಂದಿಲ್ಲ. ಇದು ಕಸಾಪ ನಿಲುವೋ ಇಲ್ಲವೇ ಜೋಶಿಯವರ ವೈಯಕ್ತಿಕ ಹೇಳಿಕೆಯ ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದರು.