ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಹಿಜಾಬ್‌ಗೆ ನಿರಾಕರಣೆ: ಪರೀಕ್ಷೆ ಬರೆಯದ ವಿದ್ಯಾರ್ಥಿನಿಯರು

ಉಡುಪಿ: ಹಿಜಾಬ್‌ಗೆ ನಿರಾಕರಣೆ: ಪರೀಕ್ಷೆ ಬರೆಯದ ವಿದ್ಯಾರ್ಥಿನಿಯರು

Sat, 23 Apr 2022 13:07:05  Office Staff   Vb

ಉಡುಪಿ: ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಪೈಕಿ ಇಬ್ಬರು ದ್ವಿತೀಯ ಪಿಯು ಕಾಮರ್ಸ್ ವಿದ್ಯಾರ್ಥಿನಿಯರು ಶುಕ್ರವಾರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಸಿಗದೆ ಪರೀಕ್ಷಾ ಕೇಂದ್ರದಿಂದ ಮನೆಗೆ ವಾಪಸಾಗಿದ್ದಾರೆ.

ದ್ವಿತೀಯ ಪಿಯು ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ಹಿನ್ನೆಲೆಯಲ್ಲಿ ಉಡುಪಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಆಲಿಯಾ ಅಸ್ವಾದಿ ಹಾಗೂ ರೇಶಮ್, ಇಂದು ಬೆಳಗ್ಗೆ ತಮ್ಮ ಕಾಲೇಜಿಗೆ ತೆರಳಿ ಹಾಲ್ ಟಿಕೆಟ್ ಪಡೆದು ಕೊಂಡರು. ಅಲ್ಲಿಂದ ಅವರಿಬ್ಬರು ಪರೀಕ್ಷಾ ಕೇಂದ್ರವಾಗಿರುವ ಉಡುಪಿ ವಿದ್ಯೋದಯ ಪ. ಪೂರ್ವ ಕಾಲೇಜಿಗೆ ಪರೀಕ್ಷೆ ಬರೆಯಲು ತೆರಳಿದರು.

ಕ್ರಿಮಿನಲ್ ಪ್ರಕರಣ; ರಘುಪತಿ ಭಟ್ ಎಚ್ಚರಿಕೆ:

ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆಯದೆ ಹೋಗುವ ಮೂಲಕ ನಾಟಕ ಮಾಡಿದ್ದಾರೆ. ಇನ್ನು ನಾವೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ನ್ಯಾಯಾಂಗ ನಿಂದನೆಯ ಕೇಸು ದಾಖಲಿಸುತ್ತೇವೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರಿಗೆ ಗುರುವಾರ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವು. ಬೆಳಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ಇಂದು ಬೆಳಗ್ಗೆ 9:30ಕ್ಕೆ ಕಾಲೇಜಿ ಗೆ ಬಂದಿದ್ದಾರೆ. ಹಿಜಾಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರು. ಅದರಂತೆ ಅವರು ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದಾರೆ ಎಂದರು. ಆದರೆ ಅವರು ಪರೀಕ್ಷಾ ಕೇಂದ್ರಕ್ಕೆ ಹೋಗಿ ನಾಟಕ ಮಾಡಿದ್ದಾರೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಸಂಬಂಧ ಪಟ್ಟ ಇಲಾಖೆಯವರಿಗೆ ಹೇಳಿದ್ದೇನೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ಸಹಿಸುವುದಿಲ್ಲ. ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಅಲ್ಲಿ ವಿದ್ಯಾರ್ಥಿನಿಯರಿಬ್ಬರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪ್ರಾಂಶುಪಾಲರಲ್ಲಿ ಮನವಿ ಮಾಡಿದರು. ಆದರೆ ಸರಕಾರದ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂಬುದಾಗಿ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಮನದಟ್ಟು ಮಾಡಿದರು.

ಪ್ರಾಂಶುಪಾಲರ ಕಚೇರಿಯಲ್ಲಿ ಈ ವಿದ್ಯಾರ್ಥಿನಿಯರ ಮನವೊಲಿಕೆಗೆ ಪ್ರಯತ್ನ ನಡೆಯಿತು. ಬೆಳಗ್ಗೆ 10:15ಕ್ಕೆ ಕೇಂದ್ರದಿಂದ ಹೊರ ನಡೆಯಲು ಮುಂದಾದ ವಿದ್ಯಾರ್ಥಿನಿಯರಿಗೆ ಮನ ಪರಿವರ್ತನೆಗಾಗಿ ಮತ್ತೆ 15 ನಿಮಿಷಗಳ ಅವಕಾಶ ಕಲ್ಪಿಸಲಾಯಿತು. ಆದರೆ ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಇವರಿಬ್ಬರು ಒಪ್ಪಲಿಲ್ಲ.

ಆದುದರಿಂದ ಈ ವಿದ್ಯಾರ್ಥಿನಿಯರು 10:45ರ ಸುಮಾರಿಗೆ ಪರೀಕ್ಷಾ ಕೇಂದ್ರದಿಂದ ಕಣ್ಣೀರು ಹಾಕಿಕೊಂಡು ಹೊರಬಂದು, ತಮ್ಮ ಮನೆಗೆ ತೆರಳಿದರು. ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಆಗಮಿಸಿದ್ದರು. ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ನ್ ನ್ನು ಒದಗಿಸಲಾಗಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಪೈಕಿ ಆಲಿಯಾ ಅಸ್ಸಾದಿ ಹಾಗೂ ಅಲ್ಲಾಝ್ ಎ.ಎಚ್. ಇತ್ತೀಚೆಗೆ ಟ್ವಿಟ್ ಮಾಡಿ, ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದು, ನಮಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.

ಹೈಕೋರ್ಟ್ ಮೆಟ್ಟಿಲೇರಿದ್ದ ಆರು ವಿದ್ಯಾರ್ಥಿನಿಯರ ಪೈಕಿ ಮತ್ತೆ ಇಬ್ಬರು ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು. ಅವರಿಗೆ ಶನಿವಾರ ಗಣಿತಶಾಸ್ತ್ರ ಪರೀಕ್ಷೆ ನಡೆಯಲಿದೆ.


Share: