ಡಿಸೆಂಬರ್ 20ರ ಚುಮು ಚುಮು ನಸುಕು. ಬೆಳಗಿಗಿನ್ನೂ ಕಾಲವಿತ್ತು. ಹಗಲಿಡೀ ದುಡಿದು ನಿದ್ದೆ ಮಾಡುತ್ತಿದ್ದ ಜನರು, ಸವಿಗನಸು ಕಾಣುತ್ತ ಮಲಗಿದ ಮಕ್ಕಳು, ಮುದುಕರಿಗೆ- ಬಾಣಂತಿಯರಿಗೊಂದು ಆಘಾತ ಕಾದಿತ್ತು. ಬೆಳ್ಳಂಬೆಳಿಗ್ಗೆಯೂ ತಮ್ಮ ಬದುಕು ಹೀಗೆ ಎತ್ತಂಗಡಿಯಾಗುವುದೆಂದು ಅವರ್ಯಾರೂ ಎಣಿಸಿರಲಿಲ್ಲ. ಬಾಗಿಲು ತೆರೆದವರ ಮುಂದೆ ಗನ್ನು ಹಿಡಿದುನಿಂತ ಪೋಲೀಸರು! ಅವರ ಹಿಂದೆ ಎಂಟ್ಹತ್ತು ಜೀಪುಗಳು, ಬೆಳ್ಳನೆಯ ಟಾಟಾ ಸುಮೋಗಳು ಸೂಟು- ಬೂಟುಗಳ ಮನುಷ್ಯರು . ಇದು ಡಿಸೆಂಬರ್ 20ರ ರವಿವಾರ ಬೆಳಿಗ್ಗೆ ಸುಮಾರು 25 ವರ್ಷಕ್ಕೂ ಮಿಕ್ಕಿ `ಅಕ್ಕಮ್ಮನ ಹೊಂಡ' ದಂಡೆಯ ಮೇಲೆ ಜೀವ ಸವೆಸಿದ 32 ಕುಟುಂಬಗಳು ಕಂಡ ಕಥೆ. ಕೂಲಿ-ನಾಲಿ ಮಾಡಿಕೊಂಡು ಸಾಲ-ಸೋಲ ಮಾಡಿ ಹೊಂಡದ ಗುಡಿಸಲುಗಳನ್ನೇ ಹಂಚು ಹಾಕಿದ ಮನೆಗಳನ್ನಾಗಿಸುವಲ್ಲಿ ಅವರು ಬೆವರು ಸುರಿಸಿದ್ದರು. ಇಲ್ಲಿರುವ 30 ಕ್ಕೂ ಹೆಚ್ಚು ಕುಟುಂಬಗಳ ಬಹುತೇಕರು ಕೊರಮ(ಭಜಂತ್ರಿ) ಸಮುದಾಯಕ್ಕೆ ಸೇರಿದವರು. ಇನ್ನುಳಿದಂತೆ ಮೂರೋ- ನಾಲ್ಕೋ ಕುಟುಂಬಗಳ ಮುಸ್ಲಿಂರಿಗೆ ಸೇರಿದವಾಗಿದ್ದವು.
ಘಟನೆ ಹಿನ್ನಲೆ
ಹಾವೇರಿ ನಗರದ ಹೃದಯಭಾಗದಲ್ಲಿರುವುದೇ `ಅಕ್ಕಮಹಾದೇವಿ ಹೊಂಡ'. ಅಕ್ಕಮ್ಮನ ಹೊಂಡವೆಂದೇ ಪ್ರಸಿದ್ಧಿ, ಈಗಾಗಲೇ ಹಲವು ಹತ್ತು ಕೋಟಿಗಳನ್ನು ನುಂಗಿದ ಅಧಿಕಾರಿಗಳು ಇಂಜಿನಿಯರುಗಳು ಈಗೆಲ್ಲಿದ್ದಾರೋ ಗೊತ್ತಿಲ್ಲ. ಆದರೆ ಅಕ್ಕಮ್ಮನ ಹೊಂಡದಲ್ಲಿ ಮಾತ್ರ ಅಕ್ಕಮ್ಮ ಸುರಿಸಿದ ಕಣ್ಣೀರಿನ ಪ್ರವಾಹವಾಗಿ `ಹೊಂಡ' ಸಾಕ್ಷಿಯಾಗಿದೆ. ಈ ಹಿಂದೆ ನಗರ ಸೌಂದರ್ಯೀಕರಣದ ಹೆಸರಿನಲ್ಲಿ ಅಕ್ಕಮ್ಮನ ಹೊಂಡಕ್ಕೆ ಕಾಯಕಲ್ಪ ಕೊಡಲು ಜಿಲ್ಲಾಡಳಿತ ತೀರ್ಮಾನಿಸಿತ್ತು. ಸುತ್ತಲೂ ಬೇಲಿ ಹಾಕಿ ಉಳ್ಳವರ `ವಾಕಿಂಗ್ ಪಾರ್ಕ್' ಮಾಡಲು ಈ `ಕೊರಮರ ಕೊಂಪೆ'ಯ ಬದುಕಿನ ಮೇಲೆ ಜಿಲ್ಲಾಡಳಿತದ ಕಣ್ಣು ಬಿತ್ತು. ವಾಕಿಂಗ್ ಮಾಡುವ ಜಾಗದಲ್ಲಿ ಹರಕು-ಮುರುಕು ಗುಡಿಸಲುಗಳ ಈ ಕೊಳಕು ಪರಿಸರವಿರುವುದೇ? ಎಂದು ಎತ್ತಂಗಡಿ ಮಾಡಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಏನೋ ಅನುದಾನದ ಹಣದೊಂದಿಗೇ ಯೋಜನೆಯೂ ಹಳ್ಳಕ್ಕೆ ಬಿತ್ತು.
ಅಲ್ಲಿಗೆ, ಬಂದ ಪೀಡೆ ತೊಲಗಿತೆಂದು ತಿಳಿದ ಈ ಕುಟುಂಬಗಳು ಸ್ವಲ್ಪ ನೆಮ್ಮದಿಯಿಂದ ಇದ್ದವು. ಇದಾಗಿ ಸುಮಾರು ಎರಡು ವರುಷಗಳಾಗಿವೆ. ಯಾರೂ ಕೂಡಾ ಕನಸಿಲ್ಲಿಯೂ ಎಣಿಸಲಾರದಂತೆ, ಒಂದೇ ಒಂದು ಲಿಖಿತ ನೋಟಿಸು ನೀಡದೇ ನ್ಯಾಯ ಕೇಳಲು ಆವಕಾಶವೇ ಇಲ್ಲದಂತಹ ರವಿವಾರದಂದು ಇಂತಹದೊಂದು ಅಮಾನವೀಯ ಕೃತ್ಯಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ನಗರಸಭೆಯವರು ಕೈ ಹಾಕಿದರು. ಹೀಗೆ ಏಕಾಏಕಿ ನಡೆದ ದಾಳಿಯಿಂದ ಜನರು ಬೀದಿಪಾಲಾಗಿದ್ದರೆ. ಪುನರ್ವಸತಿಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದೆ, ನೀರು ನಿಡಿಗಳಿಲ್ಲದ ನಗರದಿಂದ 4-5 ಕಿ.ಮೀ ದೂರದ ಊರಾಚಿಗಿನ ಖಾಲಿ ಜಾಗದಲ್ಲಿ ಈಗ್ಗೆ ಹತ್ತು ವರ್ಷಗಳ ಹಿಂದೆ `ಆಶ್ರಯ ಮನೆ'ಗಳೆಂದು ಹೆಸರಿಸಿ, ನಿರ್ಮಿಸಿದ ಹಂದಿಗೂಡುಗಳಲ್ಲಿ ಇವರನ್ನು `ಡಂಪ್' ಮಾಡಲಾಗಿದೆ. ಇವರೊಂದಿಗೆ ಇವರ ಹರಕು-ಮುರುಕು ಸಾಮಾನುಗಳನ್ನು, ಮಕ್ಕಳನ್ನು ಜೊತೆ- ಜೊತೆಗೇ ನಗರಸಭೆಯ ಟ್ರ್ಯಾಕ್ಟರ್ಗಳಲ್ಲಿ ಹೊತ್ತೊಯ್ಯುತ್ತಿದ್ದ ದೃಶ್ಯ ಮನ ಕರಗುವಂತಿತ್ತು. ಅಲಲ್ಲಿ ಹೆಂಗಸರು ಅಳುವುದು- ಕರೆಯುವುದು ಮಾಡುತ್ತಿದ್ದರೆ ಗಂಡಸರು ಪೋಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಮಕ್ಕಳು ಮಾತ್ರ ಸಾಲಿಗ್ಹೋಗುವ ಪಾಟಿ-ಚೀಲವನ್ನು ಹುಡುಕುತ್ತಿದ್ದವು.
ಜನಪ್ರತಿನಿಧಿಗಳು ಎಲ್ಲಿ ಹೋದರು?
ಈ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿ ಪೂರ್ವಯೋಜಿತವಾಗಿಯೇ ಶಾಸಕ ನೆಹರು ಚ. ಓಲೆಕಾರ ಅದ್ಯಾವಾಗಲೋ ಊರು ಬಿಟ್ಟಿದ್ದರು. ಇದೇ ವಾರ್ಡಿನ ಮತಕೇಳಿ ಆರಿಸಿ ಬಂದ ನಗರ ಸಭಾ ಅಧ್ಯಕ್ಷೆಯಾದ ಶ್ರೀಮತಿ ಮಂಜುಳಾ ಕರಬಸಮ್ಮನು ಕೂಡಾ ಮೈಸೂರಿಗೆ ಪಿಕ್ನಿಕ್ಗೆ ಹೋಗಿದ್ದಾರೆಂದು ಹೇಳಲಾಯಿತು. ನಗರಸಭೆ - ಜಿಲ್ಲಾಡಳಿತ ಮತ್ತು ಪೋಲೀಸರ ಈ ಅಮಾನವೀಯ ಕೃತ್ಯಕ್ಕೆ ಇಡೀ ಊರೇ ಮೌನ ಪ್ರೇಕ್ಷಕವಾಯಿತು. `ನನ್ ಪಾಟೀ ಚೀಲ....ಯವ್ವೋ... .ನನ್ ಪಾಟೀ ಚೀಲ' ಎಂದು ಗೋಗರೆಯುತ್ತಿದ್ದ ಮಗುವನ್ನೆಳೆದ ತಾಯಿಯೊಬ್ಬಳು `ಇನ್ನೆಲ್ಲಿ ಸಾಲಿ.... 4-5 ಮೈಲಿ ನಡೆದು ಸಾಲಿಗೋಗಾಕಾಗದಿಲ್ಲ ಬಾ' ಎಂದು ಎಳೆದೊಯ್ಯುತ್ತಿದ್ದಳು. ಜೆ.ಸಿ.ಬಿ. ಹಿಟಾಚಿ ಯಂತ್ರಗಳು ತಮ್ಮ ಕಬಂಧ ಬಾಹುಗಳನ್ನು ಚಾಚಿ ಬಡವರ ಮಹಡಿಗಳನ್ನು ಉರುಳಿಸುತ್ತಿದ್ದ ಸುದ್ದಿಯನ್ನು ಯಾರೋ ಶಾಸಕರಿಗೆ ಕಾಮೆಂಟರಿಯಂತೆ `ಮೊಬೈಲ್'ನಲ್ಲಿಯೇ ತಿಳಿಸುತ್ತಿದ್ದರು.
ಬದುಕುವುದು ಹೇಗೆ ?
ಹಂದಿ ಸಾಕ್ಕೊಂಡು, ಸಿಂದಿ ಬುಟ್ಟಿ ಹೆಣೆದು, ಕಸಬರಿಗೆ ಕಟ್ಟುತ್ತಾ, ಹೊತ್ತು, ಮಾರಿ, ದುಡಿಯುವ ಜನರು- ಇಂದು ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಇಲ್ಲಿದ್ದ ಎಲ್ಲಾ ಕುಟುಂಬಗಳಿಗೂ ಮನೆ ಕೊಟ್ಟಿದ್ದಾರೆಂದಿಲ್ಲ. ಮತ್ತು ಇವಕ್ಕೆಲ್ಲಾ ಹಕ್ಕುಪತ್ರ ಸಿಗುವುದು ಅಷ್ಟೊಂದು ಸರಳವಾದ ಪ್ರಶ್ನೆಯಾಗಿಲ್ಲ. ಕೆಲವು ಮಾನಸಿಕ ಅಸ್ವಸ್ಥರಾದ ಕುಟಂಬಗಳ ಗತಿಯಂತು ಹೇಳತೀರದು. ಇಲ್ಲಿ ಕೆಲವರಿಗೆ ಮನೆ ಕೊಟ್ಟಿಲ್ಲ. ಕಾರಣ ಕೇಳಿದರೆ ಅವರು ಹೆಸರು ನೋಂದಾಯಿಸಿ ಈ ಹಿಂದೆ 5,000/- ರೂಪಾಯಿಗಳನ್ನು ಸಂದಾಯ ಮಾಡಿಲ್ಲವೆಂದು ಹೇಳುತ್ತಾರೆ. ದುರಂತವೆಂದರೆ ಹೀಗೆ ಮನೆ ಸಿಗದೇ ಸುಮಾರು 4 ರಾತ್ರಿ ಹಾಗೂ 4 ಹಗಲುಗಳನ್ನು ಹೀಗೆಯೇ `ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ' ಮಾಡಿಕೊಂಡು ಕುಂತಿರುವ ಇವರು ಕಳೆದ ಹಲವು ದಿನ ಊಟ ಮಾಡಿರಲಿಲ್ಲ. ದೂರದ ಸೋಮಾಲಿಯದಲ್ಲೋ, ಬರ ಪೀಡಿತ ಪ್ರದೇಶದಲ್ಲೋ ಈ ತರಹದ ಘಟನೆಗಳನ್ನು ಪೇಪರ್ಗಳಲ್ಲಿ ಓದಲಾಗುತ್ತಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಈ ಊರಿನ ಸುದ್ದಿ - ಹಾವೇರಿಯ ಗಡಿಯಾಚೆ ಸುದ್ದಿಯಾಗುವುದಿಲ್ಲ!
ಉಪವಾಸ ಬಿದ್ದ ಜನರು
ರವಿವಾರದಂದು ಊರಾಚೆ ಜನರನ್ನು ಲೋಡುಗಟ್ಟಲೆ, ಅವರ ನಾಯಿಗಳೊಂದಿಗೆ, ಸಾಮಾನು- ಸರಂಜಾಮಗಳೊಂದಿಗೆ ಅವರನ್ನು ಇಳಿಸಿ ಬರಲಾಯಿತು. ಅಂದಿನಿಂದ ಇಂದಿನವರೆಗೂ ಅವರು ಸತ್ತಿದ್ದಾರೋ ಬದುಕುತ್ತಿದ್ದರೋ ಎಂಬುದನ್ನು ಯಾವೊಬ್ಬ ಜನ ಪ್ರತಿನಿಧಿಯೂ ತಲೆಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಕೂಲಿ-ನಾಲಿ ಮಾಡುತ್ತ ಹೇಗೋ ಜೀವನ ಸಾಗುಸುತ್ತಿದ್ದವರೀಗ ಬೀದಿಪಾಲಾಗಿದ್ದಾರೆ. ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಶಾಸಕನಿಗೆ, ನಗರ ಸಭೆಯ ಚುನಾಯಿತ ಸದಸ್ಯರಿಗೆ ಹಿಡಿಶಾಪ ಹಾಕಲು ಆಗದಷ್ಟು, ಹಸಿವು ಅವರನ್ನು ಕಾಡುತ್ತಿದೆ. `ಐದಾರು ಮೈಲು ನಡಕೊಂಡು ಹೋಗಿ ಬಂದು ಮುಸರೆ ತಿಕ್ಕಿ ಬದುಕುವುದಾರೂ ಹೇಗೆ ?' ಎಂದು ದುರುಗವ್ವ ಮರುಗಿದರೆ... ಕಸಬರಿಗೆ ಹೊತ್ತು ಮಾರುವ ಹನುಮವ್ವನ ಕಣ್ಣಲ್ಲಿ ನೀರು ಒಸರುತ್ತದೆ. ಮಕ್ಕಳು ಅಪ್ಪನನ್ನು ಹುಡುಕುತ್ತಿವೆ.
ಕರೆಂಟಿಲ್ಲದೆ ಮನೆಗಳು ಹೆಸರಿಗೆ ಕುಡಿಯುವ ನೀರಿನ ಟ್ಯಾಂಕು(ಸೋರಿ ಹೋಗಿ ಒಂದು ಹನಿ ನೀರು ನಿಲ್ಲಲಾರದ ಟ್ಯಾಂಕು) ಇದೆ. ಇಲ್ಲಿ ನೀನು ಬದುಕಿದೆಯಾ.. ಸತ್ತೆಯ ಎಂದು ಕೇಳುವವರಿಲ್ಲ. ರಾತ್ರಿಯೇನಾದರೂ ಜ್ವರ ಬಂದು ಮಲಗಿದರೆ ಸಾಕು ಡಾಕ್ಟರು ಇಲ್ಲಿಗೆ ಬರುವುದಿಲ್ಲ. ಇವರು ಅಲ್ಲಿಗೆ ಹೋಗಲಾಗುವುದಿಲ್ಲ. ಬದುಕು ಹಾವೇರಿಯ ನಗರದಿಂದ - ಇವರ ವಾಸದ ಹಾದಿಯು ನಡುವೇ ಮುಗಿದು ಹೋಗುತ್ತದೆ.
``ನಮ್ಗ ಒಂದುಷ್ಟು ಜಾಗ ಕೊಡಿಸ್ರೀ.....ನಾವ್ ನಾವೇ ಗುಡ್ಲೋ - ಪಡ್ಲೋ ಹಾಕ್ಕಂತಿವಿ" ಮೂರ್ನಾಕು ಕಿ.ಮೀ ದೂರದ ಸಾಲಿಗ್ಹೋಗುವವದು ತಪ್ಪಿಹೋಗಿದೆ. ಸಾಲಿಗೋದರೆ ಒಂದೊತ್ತು ಉಂಣಾಕಾದ್ರೂ ಸಿಕ್ತಿತ್ತು ಎಂದು ಗೋಳಾಡುತ್ತಾಳೆ ಹುಸೇನವ್ವ. ಈ ಮಕ್ಳೂ ಉಪಾಸ...ನಾವು ಉಪಾಸ್ ಬ್ಯಾಡಪ್ಪಾ...ದೇವ್ರೇ ಯಾಕಾರಾ ಹುಟ್ಟಿಸಿದ್ಯೋ...ಎಂದು ನಿಡುಸುಯ್ಯವ ಆ ಅಜ್ಜನ ಹೆಗಲ ಸುಕ್ಕುಗಳ ತುಂಬಾ ನೋವು.
ಈಗ ಆಗಬೇಕಿರುವುದೇನು ?
ಇಡೀ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಂಡವವಾಡುವಂತೆ ಎಲ್ಲಾ ಅಧಿಕಾರಿಗಳನ್ನೂ ತಿಂಗಳೊಂದು ಬಾರಿ ಕದವಿಟ್ಟುಕೊಂಡು `ಮಂತ್ಲೀ ಮಾಮೂಲು' ವಸೂಲಿ ಮಾಡುವ ರೌಡಿ ಶಾಸಕನಿಗೆ ಹೆದರಿ ಎಷ್ಟೋ ಜನ ಅಧಿಕಾರಿಗಳಾಗಲೇ ಊರು ಬಿಟ್ಟು ಹೋದರೆ. ಸ್ವತಃ ತಾನೊಬ್ಬ ದಲಿತನೆಂದು ಹೇಳಿಕೊಳ್ಳವ ಈತ ನಿಜಕ್ಕೂ ಸ್ಯಾಡಿಸ್ಟ್ - ದಲಿತರ ಹಕ್ಕುಗಳನ್ನು ಕಸಿಯುವಲ್ಲಿ ತನ್ನ ದುರಾಚಾರವನ್ನು ಮುಂದುವರೆಸಿದ್ದಾನೆ.
ಎಲ್ಲಾ ಪ್ರಗತಿಪರರು, ಸಾಹಿತಿಗಳು, ಸಂಘಟನೆಗಳು ಒಗ್ಗೂಡಿ ಈ ಅಮಾನವೀಯ ಕೃತ್ಯವನ್ನ ಒಕ್ಕೊರಲಿಂದ ಖಂಡಿಸಬೇಕಿದೆ. ಮಾನವ ಹಕ್ಕುಗಳ ದಮನ ಮಾಡಿದ ಇಂತಹ ರೌಡಿಗಳ ವಿರುದ್ಧ ಚುನಾಯಿತ ಪ್ರತಿನಿಧಿಗಳ ವಿರುದ್ಧ ಹೋರಾಟ ಅತ್ಯಗತ್ಯ. ಇಂತಹ ಸಂಘಟಿತ ಹೋರಾಟದ ಮುನ್ಸೂಚನೆಯ ಸುಳಿವು ಅರಿತೋ ಏನೋ ಈಗಾಗಲೇ ಎಸ್.ಎಫ್.ಐ.ನ ಜಿಲ್ಲಾ ಮುಂಖಡರುಗಳ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೆ ಜಿಲ್ಲಾಧ್ಯಕ್ಷರಾದ ನಾರಾಯಣ ಕಾಳೆ, ಪೂಜಾರ್, ಮತ್ತಿತರರ ವಿರುದ್ದ ಅಟ್ರಾಸಿಟಿ ಕೇಸ್/ ಮಾನಭಂಗದ ಕೇಸುಗಳನ್ನು ಜಡಿಯಲಾಗಿದೆ. ಇಂಥ ಅಮಾನವೀಯ ರಾಕ್ಷಸ ಪ್ರವೃತ್ತಿಯ ಶಾಸಕನ ವಿರುದ್ದ ಸಂಘಟಿತ ಹೋರಾಟ ನಡೆಯಬೇಕಾಗಿರುವುದು ಅತ್ಯಂತ ತುರ್ತಿನ ಸಂಗತಿ.
ದಮನಕ್ಕೊಳಗಾದ ಕುಟುಂಬಗಳಿಗೆ ಕೂಡಲೇ ಸೂಕ್ತ ವಸತಿ, ಕುಡಿಯುವ ನೀರು, ಊಟಕ್ಕೆ ವ್ಯವಸ್ಥೆ ಮಾಡುವುದು ಸೇರಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಕಾದು ನೋಡೋಣ ಫಲಿತಾಂಶ ಏನಾಗುತ್ತದೆಂದು.
ವರದಿ - ಸೀನು
ಸೌಜನ್ಯ: ಜನಶಕ್ತಿ