ಅಮ್ರೋಹಾ: ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಪ್ರದೇಶದಲ್ಲಿರುವ ಗೋಶಾಲೆ ಯೊಂದರಲ್ಲಿ 50ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
50ಕ್ಕೂ ಅಧಿಕ ಗೋವುಗಳು ಗುರುವಾರ ಸಾವನ್ನಪ್ಪಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಹಾಗೂ ಪಶುಸಂಗೋಪನಾ ಸಚಿವ ಧರಂ ಪಾಲ್ ಸಿಂಗ್ ಅವರು ಅಮ್ರೋಹಾ ಜಿಲ್ಲೆಗೆ ತೆರಳುವಂತೆ ಸೂಚಿಸಿದ್ದಾರೆ.
ದನಗಳು ಸಂಜೆ ಹೊತ್ತು ಮೇವನ್ನು ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದವು ಎಂದು ಅಮ್ರೋಹಾ ಜಿಲ್ಲಾಧಿಕಾರಿ ಬಿ.ಕೆ. ತ್ರಿಪಾಠಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಘಟನಾ ಸ್ಥಳಕ್ಕೆ ಧಾವಿಸಿದ್ದು ಅಸ್ವಸ್ಥ ಗೋವುಗಳಿಗೆ ಚಿಕಿತ್ಸೆ ನೀಡು ತಿದ್ದಾರೆಂದು ಮೂಲಗಳು ತಿಳಿಸಿವೆ. ಗೋಶಾಲೆಯಲ್ಲಿ 50ಕ್ಕೂ ಅಧಿಕ ದನಗಳು ಮೃತಪಟ್ಟಿರುವುದನ್ನು ಪೊಲೀಸ್ ಅಧೀಕ್ಷಕ ಆದಿತ್ಯ ಲಾಂಗೆಹ್ ಅವರು ದೃಢಪಡಿಸಿದ್ದಾರೆ.
ಪಶುಗಳಿಗೆ ಬೇಕಾದ ಮೇವನ್ನು ಗೋಶಾಲೆಯ ಆಡಳಿತವು ತಾಹಿರ್ ಎಂಬಾತನಿಂದ ಖರೀದಿಸಿದ್ದಾಗಿ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಾಹಿರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಹಾಗೂ ಆತನ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ'' ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಗೋಶಾಲೆಯ ಉಸ್ತುವಾರಿಯಾಗಿದ್ದ ಗ್ರಾಮಾಭಿವೃದ್ಧಿ ಅಧಿಕಾರಿ ಯನ್ನು ಅಮಾನತು ಗೊಳಿಸಲಾಗಿದೆ ಎಂದವರು ತಿಳಿಸಿದರು.