ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಇತಿಹಾಸದಲ್ಲೇ ದೇಶದ ಎಲ್ಲಾ ತಾಲ್ಲೂಕುಗಳಲ್ಲಿ ಆರೋಗ್ಯ ಶಿಬಿರ: ಡಾ. ಕೆ. ಸುಧಾಕರ್

ಇತಿಹಾಸದಲ್ಲೇ ದೇಶದ ಎಲ್ಲಾ ತಾಲ್ಲೂಕುಗಳಲ್ಲಿ ಆರೋಗ್ಯ ಶಿಬಿರ: ಡಾ. ಕೆ. ಸುಧಾಕರ್

Tue, 19 Apr 2022 13:44:22  Office Staff   SO News

ಮಂಡ್ಯ : ಪ್ರಧಾನಮಂತ್ರಿಗಳ ಆಶಯ ಹಾಗೂ ಕೇಂದ್ರ ಆರೋಗ್ಯ ಸಚಿವರ ಕ್ರಿಯಾಶೀಲತೆಯಿಂದ  ದೇಶದ  ಎಲ್ಲಾ ತಾಲ್ಲೂಕಿನಲ್ಲಿ ವಿಶೇಷ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಇತಿಹಾಸದಲ್ಲೆ ಮೊದಲು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕಲ್ಲು ಕಟ್ಟಡದಲ್ಲಿ ನಡೆದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ತಪಾಸಣಾ ಶಿಬಿರವನ್ನು ಪರಿಶೀಲಿಸಿ ಅವರು ಮಾತನಾಡಿದರು.

 ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ವಿಶೇಷ ಆರೋಗ್ಯ ಶಿಬಿರವನ್ನು ನಡೆಸಿ ಸಾರ್ವಜನಿಕರ  ಆರೋಗ್ಯದಲ್ಲಿ ತೊಂದರೆ ಇದ್ದಲ್ಲಿ ಚಿಕಿತ್ಸೆ ನೀಡಲಾಗುವುದು. ಆಯುಷ್ಮಾನ್ ಭಾರತ್ ಆರೋಗ್ಯ  ಕರ್ನಾಟಕ  ಕಾರ್ಡ್ ಇದ್ದರೆ ಆರೋಗ್ಯದಲ್ಲಿ ಏರುಪೇರಾದರೆ  ಸರ್ಕಾರಿ ಆಸ್ಪತ್ರೆಯಾಗಲಿ ಅಥವಾ ಸರಕಾರದಿಂದ ದಾಖಲಿಸಿದ ಯಾವುದೇ ಉನ್ನತ ಮಟ್ಟದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುವ ವ್ಯವಸ್ಥೆ ಇದೆ.
ಈ ಕಾರ್ಡನ್ನು ಉಚಿತವಾಗಿ ಪ್ರತಿಯೊಬ್ಬರಿಗೂ ನೀಡಲು ಯೋಜಿಸಲಾಗಿದೆ ಎಂದರು.

 ಒಂದು ಭಾರಿ ಕಾರ್ಡ್ ಮಾಡಿಸಿದರೆ ಜೀವನ ಪೂರ್ತಿ ಕಾರ್ಡ್ ಚಾಲ್ತಿಯಲ್ಲಿರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಇರುವಂತಹ ಎಲ್ಲಾ ಜನತೆಗೂ ಸಹ ಈ ಕಾರ್ಡನ್ನು ಉಚಿತವಾಗಿ ನೀಡಬೇಕೆಂದು ತಿಳಿಸಿದರು.

ಯಾವ ಸಮಾಜ ಉತ್ತಮವಾದ ಆರೋಗ್ಯಯುಕ್ತ ಸಮಾಜ ನಿರ್ಮಿಸುತ್ತದೆ. ಅಲ್ಲಿ ಸಂಪದ್ಭರಿತ ದೇಶವನ್ನು ನಿರ್ಮಾಣ ಮಾಡಬಹುದು ಹಾಗಾಗಿ ಆರೋಗ್ಯಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಆಲೋಚನೆ ಮಾಡಿ ಯೋಜನೆಯನ್ನು ರೂಪಿಸುತ್ತಾರೆ ಎಂದು ಹೇಳಿದರು.

ಸಾಂಕ್ರಮಿಕ ರೋಗಕಿಂತ  ಅಸಾಂಕ್ರಮಿಕ ರೋಗದಿಂದಲೇ ಸಾವು ಸಂಭವಿಸುವುದು ಹೆಚ್ಚು. 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು ಆಗ ಮಾತ್ರ ಆರೋಗ್ಯವನ್ನು ಸುಧಾರಿಸಿಕೊಳ್ಳುಲು ಸಾಧ್ಯ ಎಂದರು.

ಒಂದು ಆರೋಗ್ಯ ಶಿಬಿರಕ್ಕೆ 2ಲಕ್ಷ ರೂ ಗಳನ್ನು ನೀಡಲಾಗುತ್ತದೆ. ಎಲ್ಲಾ ಸೌಲಭ್ಯವನ್ನು ಒಳಗೊಂಡಂತಹ ಆರೋಗ್ಯ ಶಿಬಿರವನ್ನು ಮಂಡ್ಯದಲ್ಲಿ ನಡೆಯುತ್ತಿರುವುದು ಬಹಳ ಶ್ಲಾಘನೀಯ  ಎಂದರು.

ಈ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಸಹ ವಿಶೇಷವಾಗಿ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಬೇಕು ಹಾಗೆ ಜನರಿಗೆ ಶಿಬಿರದ ಬಗ್ಗೆ ಇನ್ನಷ್ಟು ಜಾಗೃತಿಯನ್ನು ನೀಡಬೇಕು ಎಂದರು.

ಜನ ಔಷಧಿ ಇಂದು ಬಡವರ ಔಷಧಿ ಬಡವರಿಗೆಂದೇ ಪ್ರಧಾನಮಂತ್ರಿಗಳು ಈ ಜನ ಔಷಧವನ್ನು ಜಾರಿಗೆ ತಂದರು. 2008ರಿಂದ 2014ರವರೆಗೆ ದೇಶದಲ್ಲಿ ಕೇವಲ 88 ಜನ ಔಷದಿ ಮಳಿಗೆಗಳು ತೆರೆಯಲಾಗಿತ್ತು. ಆದರೆ
2014 ರಿಂದ 2022 ರ ವರೆಗೆ 8080 ಜನ ಔಷಧಿ ಮಳಿಗೆಗಳು ಆರಂಭವಾಗಿದೆ ಇದು ನರೇಂದ್ರ ಮೋದಿಯವರಿಗೆ ಜನರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ಶ್ರವಣದೋಷವುಳ್ಳ ಮಕ್ಕಳಿಗೆ ಶ್ರವಣ ಸಾಧನ ಪರಿಕರಗಳ ವಿತರಣೆಯನ್ನು ಮಾಡಿದರು.

ಕಾರ್ಯ ಕ್ರಮದಲ್ಲಿ  ಜಿಲ್ಲಾಧಿಕಾರಿಗಳಾದ ಎಸ್.ಅಶ್ವತಿ,
ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಜೆ ದಿವ್ಯಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಎನ್.ಧನಂಜಯ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಂಜಯ್  ಟಿ.ಹೆಚ್.ಒ ಡಾ.ಜವರೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Share: