ಪಟ್ನಾ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ವನ್ನು ನಿಷೇಧಿಸುವುದರ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ನಿಷೇಧಿಸಬೇಕು ಎಂದು ವಿವಿಧ ಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.
ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಬುಧವಾರ ಪಿಎಫ್ಐ ನಿಷೇಧಕ್ಕೆ ಪ್ರತಿಕ್ರಿಯಿಸಿ, “ಪಿಎಫ್ಐನಂತೆ ದ್ವೇಷ ಹರಡುವ ಆರೆಸ್ಸೆಸ್ ಸೇರಿದಂತೆ ಎಲ್ಲ ಸಂಘಟನೆಗಳಿಗೆ ನಿಷೇಧ ವಿಧಿಸಬೇಕು. ಮೊದಲು ಆರೆಸ್ಸೆಸ್ ನಿಷೇಧಿಸಬೇಕು. ಅದು ಪಿಎಫ್ಐಗಿಂತ ಕೆಟ್ಟ ಸಂಘಟನೆ ಆರೆಸ್ಸೆಸ್ ಅನ್ನು ಎರಡು ಬಾರಿ ನಿಷೇಧಿಸಲಾಗಿತ್ತು. ಆರೆಸ್ಸೆಸ್ ಅನ್ನು ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತಿದ್ದ ಸರ್ದಾರ್ ಪಟೇಲ್ ಅವರು ನಿಷೇಧಿಸಿದ್ದರು. ಎಂದು ಟ್ವಿಟ್ ಮಾಡಿದ್ದಾರೆ. ಆರೆಸ್ಸೆಸ್ ಹಿಂದೂ ಉಗ್ರವಾದಿ ಸಂಘಟನೆ ಯಾಗಿದ್ದು, ನಿಷೇಧಕ್ಕೆ ಅರ್ಹವಾಗಿದೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಸಮಾಜದ ಶಾಂತಿ ಕದಡುವ ಎಲ್ಲ ಸಂಘಟನೆಗಳ ನಿಷೇಧವಾಗಲಿ: ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ, ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಂಘಟನೆ ವಿರುದ್ಧ ಸರಕಾರ ಕ್ರಮ ಕೈಗೊಂಡರೆ ವಿರೋಧಿಸುವುದಿಲ್ಲವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇ ರೀತಿ ಆರೆಸೆಸ್ಟ್ ಮತ್ತಿತರ ಸಂಘಟನೆಗಳು ಕಾನೂನು ವಿರೋಧಿ ಕೃತ್ಯಕ್ಕೆ ಕೈ ಹಾಕಿದರೆ, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಆ ಸಂಘಟನೆಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದರು. ಸಮಾಜದ ಶಾಂತಿ ಸಾಮರಸ್ಯ ಹಾಳು ಮಾಡುವ, ದ್ವೇಷದ ರಾಜಕಾರಣ ಮಾಡುವ ಸಂಘಟನೆ ಯಾವುದೇ ಆಗಿರಲಿ ಸರಕಾರ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ಆರೆಸ್ಸೆಸ್ ನಿಷೇಧ ಯಾಕಿಲ್ಲ? ಸಂಸದ ಕೋಡಿಕುನಿಲ್ ಸುರೇಶ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ (ಪಿಎಫ್ಐ) ದೊಂದಿಗೆ ಹೋಲಿಕೆ ಮಾಡಿರುವ ಕೇರಳದ ಕಾಂಗ್ರೆಸ್ ಸಂಸದ ಕೋಡಿ ಕುನ್ನಿಲ್ ಸುರೇಶ್, ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿರುವ ಆರೆಸ್ಸೆಸ್ ಅನ್ನು ಕೂಡ ನಿಷೇಧಿಸಬೇಕು ಎಂದು ಬುಧವಾರ ಆಗ್ರಹಿಸಿದ್ದಾರೆ.
ಆರೆಸೆಸ್ ಮೇಲೆ ಕೂಡ ನಿಷೇಧ ವಿಧಿಸುವಂತೆ ನಾವು ಆಗ್ರಹಿಸುತ್ತೇವೆ. ಪಿಎಫ್ಐ ನಿಷೇಧಿಸುವುದೊಂದೇ ಪರಿಹಾರ ವಲ್ಲ. ಆರೆಸ್ಸೆಸ್ ಕೂಡ ದೇಶಾದ್ಯಂತ ಹಿಂದೂ ಕೋಮುವಾದ ವನ್ನು ಹರಡುತ್ತಿದೆ' ಎಂದು ಅವರು ಹೇಳಿದ್ದಾರೆ.
“ಆದುದರಿಂದ ಆರೆಸ್ಸೆಸ್ ಹಾಗೂ ಪಿಎಫ್ಐ ಎರಡೂ ಸಮಾನ, ಸರಕಾರ ಎರಡನ್ನೂ ನಿಷೇಧಿಸಬೇಕು. ಪಿಎಫ್ ಐಗೆ ಮಾತ್ರ ಯಾಕೆ ನಿಷೇಧ ಹೇರಬೇಕು? ಆರೆಸ್ಸೆಸ್ ಕೂಡ ಬಹುಸಂಖ್ಯಾತ ಕೋಮುವಾದ ಮಾಡುತ್ತಿದೆ' ಎಂದು ಕೆ. ಸುರೇಶ್ ಹೇಳಿದ್ದಾರೆ.
ನಿಷೇಧಿಸುವುದು ಪರಿಹಾರವಲ್ಲ ಸೀತಾರಾಮ್ ಯೆಚೂರಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದಂತಹ ಸಂಘಟನೆಗಳನ್ನು ನಿಷೇಧಿಸುವುದು ಪರಿಹಾರವಲ್ಲ. ಅವುಗಳನ್ನು ರಾಜಕೀಯವಾಗಿ ಪ್ರತ್ಯೇಕಿಸುವುದು ಹಾಗೂ ಅವುಗಳ ಅಪರಾಧ ಚಟುವಟಿಕೆಗಳ ವಿರುದ್ಧ ದೃಢ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ ಎಂದು ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಬುಧವಾರ ಹೇಳಿದ್ದಾರೆ.
ತಮ್ಮ ಪಕ್ಷದ ನೇತೃತ್ವದ ಎಲ್ಡಿಎಫ್ ಆಡಳಿತ ಇರುವ ಕೇರಳ 'ಭಯೋತ್ಪಾದನೆ ಯ ಹಾಟ್ಸ್ಪಾಟ್” ಎಂಬ ಬಿಜೆಪಿ ವರಿಷ್ಠ ಜೆ.ಪಿ. ನಡ್ಡಾ ಅವರ ಆರೋಪದ ವಿರುದ್ಧ ವಾಗ್ದಾಳಿ ನಡೆಸಿರುವ ಯೆಚೂರಿ, “ಪ್ರತೀಕಾರದ ಹತ್ಯೆ'ಯನ್ನು ನಿಲ್ಲಿಸಲು ಆರೆಸ್ಸೆಸ್ಗೆ ಸೂಚಿಸುವಂತೆ ಕೋರಿದರು. ಅಲ್ಲದೆ, ಉಗ್ರವಾದಿ ಸಂಘಟನೆಗಳ ವಿರುದ್ಧ ರಾಜ್ಯದ ಆಡಳಿತ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡುವಂತೆ ತಿಳಿಸಿದರು.
ಒಂದು ವೇಳೆ ನಡ್ಡಾ ಅವರು ಕೇರಳ ಭಯೋತ್ಪಾದನೆ ಹಾಗೂ ದುಷ್ಟ ಶಕ್ತಿಗಳ ಹಾಟ್ ಸ್ಪಾಟ್ ಆಗುವುದನ್ನು ತಡೆಯಲು ಬಯಸುವು ದಾದರೆ, ಕೋಮು ಧ್ರುವೀಕರಣವನ್ನು ತೀವ್ರಗೊಳಿಸುವುದು, ದ್ವೇಷ ಹರಡುವುದು ಹಾಗೂ ಬುಲ್ಲೋಜ ರಾಜಕಾರಣ ಉತ್ತರವಲ್ಲ ಎಂದು ಅವರು ಹೇಳಿದ್ದಾರೆ.
ನಿಷೇಧ ಬೆಂಬಲಿಸಲ್ಲ: ಉವೈಸಿ ತಾನು ಯಾವಾಗಲೂ ಪಿಎಫ್ಐ ನಿಲುವನ್ನು ವಿರೋಧಿಸುತ್ತೇನೆ ಹಾಗೂ ಪ್ರಜಾಪ್ರಭುತ್ವ ನಿಲುವನ್ನು ಬೆಂಬಲಿಸುತ್ತೇನೆ ನಿಜ. ಆದರೆ, ನ್ಯಾಯಾಲಯದ ಮೂಲಕ ನ್ಯಾಯ ಪಡೆಯಲು ಮುಖ್ಯವಾಗಿ ಮುಸ್ಲಿಮರು ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಪಿಎಫ್ಐ ನಿಷೇಧವನ್ನು ಬೆಂಬಲಿಸಲಾಗುವು ದಿಲ್ಲ ಎಂದು ಎಐಎಂಐಎಂ ವರಿಷ್ಠ ಅಸದುದ್ದೀನ್ ಓವೈಸಿ ಟ್ವೀಟ್ ನಲ್ಲಿ ಹೇಳಿದ್ದಾರೆ.
'ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ: ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಬುಧವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐ ಸಂಘಟನೆ ವಿಚಾರವಾಗಿ ಈಗಾಗಲೇ ನಾನು ಹೇಳಿದ್ದೇನೆ. ಯಾವುದೇ ಸಂಘಟನೆಗಳು ಸಮಾಜಘಾತುಕ ಚಟುವಟಿ ಕೆಯಲ್ಲಿ ತೊಡಗಿದರೆ ಕಠಿಣ ಕ್ರಮ ಆಗಬೇಕು. ಎನ್ಐಎ ದಾಳಿ ಯ ಸತ್ಯಾಂಶಗಳನ್ನು ಜನರ ಮುಂದೆ ಇಡಬೇಕು ಎಂದರು.
ಯಾವ ಯಾವ ಸಂಘಟನೆಗಳಿಂದ ದೇಶ ದ್ರೋಹದ ಕೆಲಸ ಆಗಿದೆ? ಯಾವ ರೀತಿ ಗಲಭೆ ಸೃಷ್ಟಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂಬ ಮಾಹಿತಿಯನ್ನು ಜನರ ಮುಂದೆ ಇಡಬೇಕು. ಇದು ಕೇಂದ್ರ ಸರಕಾರದ ಕರ್ತವ್ಯ ಎಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ಪಿಎಫ್ಐ ಸಂಘಟನೆ ನಿಷೇಧ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲೆಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದ ಬೆಳೆಸುವ ಕೆಲಸವನ್ನು ಸರಕಾರ ಮಾಡಬೇಕು. ಯಾವುದೇ ಒಂದು ಸಂಘಟನೆ ನಿಷೇಧ ಮಾಡಿದರೆ ಶಾಂತಿ ನೆಲೆಸುವುದಿಲ್ಲ ಎಂದು ಅವರು ಹೇಳಿದರು.