ಭಟ್ಕಳ, ಜನವರಿ 15: ಶತಮಾನದ ಸುದೀರ್ಘ ಸೂರ್ಯಗ್ರಹಣಕ್ಕೆ ಬೆದರಿದ ಬಹುತೇಕ ಭಟ್ಕಳಿಗರು ರಸ್ತೆಗೆ ಇಳಿಯಲು ಹಿಂದೆ ಮುಂದೆ ನೋಡಿದ ಪರಿಣಾಮವಾಗಿ ಭಟ್ಕಳ ಶುಕ್ರವಾರ ಸಂಜೆಯವರೆಗೂ ಜನರ ಓಡಾಟವಿಲ್ಲದೇ ಸ್ಥಬ್ಧಗೊಂಡಿತು. ತಾಲೂಕಿನ ಶಹರ ಹಾಗೂ ಗ್ರಾಮೀಣ ಭಾಗಗಳ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿಕೊಂಡು ಗ್ರಹಣಕ್ಕೊಳಗಾದ ಸೂರ್ಯನ ಮಂದ ಬೆಳಕಿಗೆ ಧ್ವನಿಯಾದವು. ಸರಕಾರದ ನಿಯಮಗಳಿಗನುಸಾರವಾಗಿ ಸರಕಾರಿ ಕಚೇರಿಗಳು ಬಾಗಿಲು ತೆರೆದುಕೊಂಡಿದ್ದರೂ, ಬೆಳಿಗ್ಗೆಯೇ ಕಚೇರಿಯನ್ನು ಸೇರಿಕೊಂಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಹಣದ ಅವಧಿಯಲ್ಲಿ ಇದ್ದೂ ಇಲ್ಲದ ಹಾಗೆ ಮೌನಕ್ಕೆ ಶರಣಾಗಿರುವುದು ಕಂಡು ಬಂತು. ತಾಲೂಕಿನ ಹೆಚ್ಚಿನ ಎಲ್ಲ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿತ್ತು.


ತಾಲೂಕಿನ ಬಹುತೇಕ ದೇವಾಲಯಗಳು ಗ್ರಹಣದ ಅವಧಿಯಲ್ಲಿ ಬಾಗಿಲು ಮುಚ್ಚಿಕೊಂಡಿದ್ದವು. ಜಗತ್ಪ್ರಸಿದ್ಧ ಮುರುಡೇಶ್ವರ ದೇವಾಲಯದಲ್ಲಿ ಗ್ರಹಣಕ್ಕೂ ಮುಂಚೆ ಈಶ್ವರನಿಗೆ ಅಭಿಷೇಕ ಹಾಗೂ ಪೂಜೆಗಳನ್ನು ನೆರವೇರಿಸಲಾಯಿತು. ಗ್ರಹಣದ ನಿಮಿತ್ತ ಭಟ್ಕಳದ ವಿವಿಧ ಮಸೀದಿಗಳಲ್ಲಿ ಮುಸ್ಲೀಮರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು. ತಾಲೂಕಿನ ವಿವಿದೆಡೆ ಹಲವರು ಗ್ರಹಣ ವೀಕ್ಷಣೆಗೆ ದೃಶ್ಯ ಮಾಧ್ಯಮದ ಮೊರೆ ಹೋದರೆ, ಕೆಲವರು ಎಕ್ಷರೇ ಹಾಳೆ, ಕಪ್ಪು ಕನ್ನಡಕ ಧರಿಸಿ ಕ್ಷಣ ಕ್ಷಣದ ಬದಲಾವಣೆಯನ್ನು ಗ್ರಹಿಸುವತ್ತ ಮನ ಮಾಡಿರುವುದು ಕಂಡು ಬಂತು. ಮುರುಡೇಶ್ವರದಲ್ಲಿ ಲಾಯನ್ಸ ಕ್ಲಬ್ ವತಿಯಿಂದ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ವಿಶೇಷ ಉಪಕರಣಗಳ ಮೂಲಕ ಗ್ರಹಣ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಯಿತು.

ಈ ಸಮಯದಲ್ಲಿ ಲಾಯನ್ಸ ಕ್ಲಬ್ಬಿನ ಸಕ್ರೀಯ ಸದಸ್ಯರುಗಳಾದ ಎಮ್.ವಿ.ಹೆಗ್ಡೆ, ಎಸ್.ಎಸ್.ಕಾಮತ್, ವಿಶ್ವನಾಥ ಕಾಮತ್, ಗಜಾನನ ಶೆಟ್ಟಿ, ಡಾ.ಹರಿಪ್ರಸಾದ್ ಕಿಣಿ, ಡಾ.ವಾಧಿರಾಜ ಭಟ್, ಮಂಜುನಾಥ ದೇವಾಡಿಗ, ಡಾ.ಸುನಿಲ್ ಜತ್ತನ್ನ ಮತ್ತಿರರು ಸೂರ್ಯಗ್ರಹಣದ ಕುರಿತು ವೈಜ್ಞಾನಿಕ ವಿವರಣೆ ನೀಡಿದರು. ಇಷ್ಟಾದರೂ ಗ್ರಹಣ ವೀಕ್ಷಣೆ ಪಾಪವೆಂಬಂತೆ ಮನೆಯೊಳಕ್ಕೆ ಸೇರಿಕೊಂಡು ಹೊರಕ್ಕೆ ಬಾರದವರು ಅದೆಷ್ಟೋ ಮಂದಿ! ಆದರೆ ಗ್ರಹಣದ ಅವಧಿ ಮುಗಿಯುತ್ತಿದ್ದಂತೆಯೇ ಶುಕ್ರವಾರ ಸಂಜೆ ೪ ಗಂಟೆಯ ಸುಮಾರಿಗೆ ತಾಲೂಕಿನ ಸಮುದ್ರ ಕಿನಾರೆಯಲ್ಲಿ ಜನಜಂಗುಳಿ ಏರ್ಪಾಡಾಯಿತು. ಒಟ್ಟಿನಲ್ಲಿ ಈ ಕಂಕಣ ಸೂರ್ಯಗ್ರಹಣವೆಂಬುದು ಭವಿಷ್ಯದಲ್ಲಿ ಗ್ರಹಣ ಎದುರಾದಾಗಲೆಲ್ಲ ಮತ್ತೆ ಮತ್ತೆ ದಿನಕರನ ಶತಮಾನದ ಸಂಕಷ್ಟವನ್ನು (!?) ಮೆಲುಕು ಹಾಕುತ್ತ ಮುಂದೆ ಸಾಗುವುದು ಮಾತ್ರ ಸೂರ್‍ಯನ ಬೆಳಕಿನಷ್ಟೇ ಸತ್ಯ!