ಭಟ್ಕಳ: ಪುರಸಭೆಯ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಕೆಲಸ ಆರಂಭಿಸಲು, ಮಳೆಗಾಲ ಪ್ರಾರಂಭವಾದರೂ ಆದೇಶ ನೀಡಿಲ್ಲ. ಇದರಿಂದ 35 ಮಂದಿ ಫಲಾನುಭವಿಗಳು. ಇತ್ತ ಮನೆಯೂ ಕಟ್ಟಲಾಗದೇ ಅತ್ತ ಹಳೆ ಮನೆ ದುರಸ್ತಿ ಮಾಡಲಾರದೇ ಸಂಕಷ್ಟದಲ್ಲಿದ್ದಾರೆ.
ಮೂರು ವರ್ಷಗಳ ಹಿಂದೆ ವಾಜಪೇಯಿ ವಸತಿ ಯೋಜನೆಯಡಿ ಹೊಸ ಮನೆ ನಿರ್ಮಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿದಾರರು ಹಲವು ಬಾರಿ ಪುರಸಭೆಗೆ ತೆರಳಿ ವಿಚಾರಣೆ ನಡೆಸಿದ ಬಳಿಕ, ಈ ವರ್ಷ ಮಾರ್ಚ್ ತಿಂಗಳಲ್ಲಿ ಮನೆ ಮಂಜೂರಾತಿಯ ಬಗ್ಗೆ ಆಶ್ವಾಸನೆ ನೀಡಲಾಗಿತ್ತು. ಈ ಹಿಂದೆ ಸಲ್ಲಿಸಿದ ಅರ್ಜಿಗಳ ಜೊತೆಗೆ ಹೊಸದಾಗಿ ಅರ್ಜಿ ಹಾಗೂ ದಾಖಲೆಗಳನ್ನು ಪುರಸಭೆ ಪಡೆದುಕೊಂಡಿತ್ತು. ಮನೆ ಕಲಸ ಆರಂಭಿಸಲು ಮೇ ತಿಂಗಳಿನಲ್ಲಿ ಆದೇಶ ನೀಡುವುದಾಗಿ ಭರವಸೆ ನೀಡಲಾಗಿತ್ತು,ಮನೆ ಕೆಲಸ ಆರಂಭಿಸಲು ಆದೇಶ ಸಿಗುವ ನಿರೀಕ್ಷೆಯಲ್ಲಿ ಹಲವರು ಮರಳು, ಕಲ್ಲುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಮೂರು ತಿಂಗಳಿನಿಂದ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಭರವಸೆ ಇನ್ನೂ ಈಡೇರದ ಕಾರಣ ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ.
ಕೆಲವು ಅರ್ಜಿದಾರರು ತಮಗೆ ಮನೆ ಮಂಜೂರಾಗದಿದ್ದರೂ ಪುರಸಭೆ ಸಿಬ್ಬಂದಿಯ ಮಾತಿನ ವಿಶ್ವಾಸದ ಮೇರೆಗೆ ಅಡಿಪಾಯದ ಕೆಲಸವನ್ನೂ ಪೂರ್ಣಗೊಳಿಸಿದ್ದಾರೆ. ಆದರೆ, ಅವರಿಗೆ ಮನೆ ಮಂಜೂರಾಗಿಲ್ಲ. ಪುರಸಭೆ ಕೂಡ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.
'ಮನೆ ಮಂಜೂರು ಮಾಡಿ'
`ಮೂರು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ನಮಗೆ ಮನೆ ಮಂಜೂರಾಗುವ ಭರವಸೆ ಮೂಡಿತ್ತು, ಆದರೆ, ಪುರಸಭೆ ಅದಕ್ಕೂ ಅವಕಾಶ ನೀಡುತ್ತಿಲ್ಲ. ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮಂಜೂರಾತಿ ಪಡೆದವರಿಗೆ ಆದೇಶ ಪತ್ರ ನೀಡಿ ಎರಡು ಕಂತಿನ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ, ಪುರಸಭೆಯಿಂದ ನಮಗೆ ಇನ್ನೂ ಮಂಜೂರಾತಿ ಪತ್ರ ನೀಡಿಲ್ಲ, ಶೀಘ್ರವೇ ಭರವಸೆ ಈಡೇರಿಸಬೇಕು' ಎಂದು ಮಣ್ಣುಳಿಯ ನಿವಾಸಿ ಜಗದೀಶ ನಾಯ್ಕ ಒತ್ತಾಯಿಸುತ್ತಾರೆ.
ಫಲಾನುಭವಿಗಳ ಆಯ್ಕೆ ಮಾಡಿ ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗಿದ್ದು, ಮಂಜೂರಾಗಿದೆ. ತಾಂತ್ರಿಕ ಕಾರಣದಿ೦ದ ಆದೇಶ ಪತ್ರ ತೆಗೆಯಲಾಗುತ್ತಿಲ್ಲ.ಕಿರಣ, ಪುರಸಭೆ ವಸತಿ ಮೇಲ್ವಿಚಾರಣಾ సిబ్బంది ತಿಳಿಸಿದ್ದಾರೆ.