ಕಾರವಾರ : ಕಾಲ, ಜನಾಂಗ, ದೇಶಕ್ಕೆ ಸೀಮಿತವಾಗದೇ ಇಡೀ ವಿಶ್ವಕ್ಕೆ ಸಲ್ಲುವಂತ ವ್ಯಕ್ತಿತ್ವ ಹೊಂದಿದ ಜ್ಞಾನಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಾಗಿರುವುದರಿಂದ ಜ್ಞಾನದ ಸಂಕೇತವಾಗಿ ಅವರ ಪ್ರತಿಮೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಷ್ಟೇ ಅಲ್ಲದೇ ಜಗತ್ತಿನ 150 ಕ್ಕೂ ಹೆಚ್ಚು ದೇಶಗಳಲ್ಲಿ ನಾವು ಕಾಣುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಮಾಲಾದೇವಿ ಜಿಲ್ಲಾ ರಂಗಮಂದಿರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಪ್ರಧಾನಮಂತ್ರಿ ಬಾಬು ಜಗಜೀವನರಾಮ್ ರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ನೈಜ್ಯ ಇತಿಹಾಸವನ್ನು ಜಗತ್ತಿಗೆ ತಿಳಿಯುವ ರೀತಿಯಲ್ಲಿ ಹೇಳಿದ ಜ್ಞಾನಿಯಾದ ಇವರ ವ್ಯಕ್ತಿತ್ವವು ಯಾವ ಅಳತೆ, ಮಾನದಂಡಕ್ಕೆ ಸಿಗದಿರುವಂತಹದ್ದಾಗಿದೆ. ಎಲ್ಲರೂ ಒಪ್ಪುವಂತಹ ಮಾದರಿ ವ್ಯಕ್ತಿತ್ವ ಅಂಬೇಡ್ಕರರದ್ದಾಗಿದೆ, ಹಾಗಾಗಿ ಅಂಬೇಡ್ಕರ್ ಕುರಿತಾದ ಕೃತಿಗಳನ್ನು ಅಷ್ಟೇ ಓದದೇ ಅವರೇ ಬರೆದ ಕೃತಿಗಳನ್ನು ಓದಿದಾಗ ಮಾತ್ರ ನಮ್ಮಲ್ಲಿರುವ ಅಂಬೇಡ್ಕರ್ ಎಂಬ ಜ್ಯೋತಿ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಳಿಕ ಸಹಾಯಕ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬೂ ಜಗಜೀವನರಾಮರವರು ದೇಶಕಂಡ ಶ್ರೇಷ್ಠ ಹೋರಾಟಗಾರರಲ್ಲಿ ಮುಂಚೂಣಿ ನಾಯಕರಾಗಿದ್ದಾರೆ. ಮೌಲ್ಯಾಯುತವಾದ ರಾಜಕಾರಣ ಮಾಡಿದ ಇವರು ಅಸ್ಪೃಶ್ಯತೆ ನಿವಾರಣೆಗೆ, ಸಾಮಾಜಿಕ ಬದಲಾವಣೆಗೆ ಒತ್ತು ನೀಡಿದರು. ಬಾಬೂಜಿಯವರು ಸರಳ ಸಜ್ಜನ ರಾಜಕಾರಣಿಯಾಗಿದ್ದರು, ಪಾಂಡಿತ್ಯದಲ್ಲಿ ಅದ್ವಿತೀಯ ಸಾಧಕರಾಗಿದ್ದರು. ದೇಶವು ಕಂಡ ಆಹಾರ ವಿಪತ್ತು ಸಂದರ್ಭದಲ್ಲಿ ಹಸಿರು ಕ್ರಾಂತಿಯ ಮುಖಾಂತರ ದೇಶದ ಆಹಾರ ಸ್ವಾವಲಂಬನೆ ಸಾಧಿಸುವಂತೆ ಮಾಡಿ ಹಸಿರು ಕ್ರಾಂತಿಯ ಹರಿಕಾರ ಎಂದೆನಿಸಿಕೊಂಡರೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಗಾ ಎಮ್ ಮಾತನಾಡಿ, ಹುಟ್ಟಿನಿಂದ ಯಾರು ಮೇಲು-ಕೀಳಲ್ಲ ಬೆಳೆಯುತ್ತ ಅವರ ವ್ಯಕ್ತಿತ್ವ ಉತ್ತಮವಾಗಿ ರೂಪುಗೊಳ್ಳಲು ಅಂಬೇಡ್ಕರ್ ಮತ್ತು ಬಾಬೂ ಜಗಜೀವನರಾಮ್ ಅವರಂತಹ ವ್ಯಕ್ತಿತ್ವ ಮತ್ತು ತತ್ವಾದರ್ಶಗಳು ನಮಗೆ ದಾರಿದೀಪವಾಗಿವೆ. ಜೀವನದಲ್ಲಿನ ಎಲ್ಲ ಅಡೆತಡೆಗಳನ್ನು ದಾಟಿ, ಜೀವನಪರ್ಯಂತ ಸಮಾನತೆಗಾಗಿ ಹೆಣ್ಣುಮಕ್ಕಳ ಹಕ್ಕಿಗಾಗಿ, ಶೋಷಿತರ ಏಳಿಗೆಗಾಗಿ ಅಂಬೇಡ್ಕರರು ಜೀವನ ಸವೆಸಿದ್ದಾರೆ. ವ್ಯಕ್ತಿ ಸಾಯಬಹುದು ಆದರೆ ವ್ಯಕ್ತಿಯ ವಿಚಾರಗಳು, ಚಿಂತನೆಗಳು ಎಂದಿಗೂ ಸಾಯುವುದಿಲ್ಲವೆಂಬುದಕ್ಕೆ ಬಾಬಾಸಾಹೇಬರ ಜೀವನವೇ ಒಂದು ನಿದರ್ಶನವಾಗಿದೆ ಎಂದು ಹೇಳಿದರು.
ಪತ್ರಕರ್ತ ನಾಗರಾಜ ಹರಪನಹಳ್ಳಿ ಉಪನ್ಯಾಸ ನೀಡಿ, ಜಾತಿವಾದಿಗಳ ಕೈಯಿಂದ ದೇಶವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ಮಾಡಿದ ಶ್ರೇಯ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಜಾತಿವಾದಿಗಳಿಗೆ ಬೆಂಕಿಯುಂಡೆಯಂತಿದ್ದ ಇವರು ಶೋಷಿತರ, ದಮನಿತರ, ಮಹಿಳೆಯರ ಹಕ್ಕುಗಳಿಗಾಗಿ ಸಮಾನತೆಗಾಗಿ ಜೀವನವಿಡಿ ಹೋರಾಡಿದರು. ಪ್ರತಿಯೊಂದು ಸಮುದಾಯದ ಏಳಿಗೆಗಾಗಿ ಹಲವಾರು ರೀತಿಯ ಕಾರ್ಯವನ್ನು ಕೈಗೊಂಡರು. ಎಲ್ಲರಿಗೂ ಸಮಾನ ಹಕ್ಕಿನ ಅವಕಾಶವನ್ನು ಶ್ರೇಷ್ಠ ಸಂವಿಧಾನದ ಮೂಲಕ ನೀಡಿದರು. ಆರ್ಬಿಐ ಸ್ಥಾಪನೆ, ಬಾಕ್ರಾನಂಗಲ್ ಅಣೆಕಟ್ಟು, ನೀರಾವರಿ, ವಿದ್ಯುತ್ ಯೋಜನೆಗಳಲ್ಲಿ ಅಂಬೇಡ್ಕರರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ವಿತರಣೆ ಮಾಡಲಾಯಿತು. ಪೌರಕಾರ್ಮಿಕರಿಗೆ ಮುಂಬಡ್ತಿ ನೀಡಿದ ಆದೇಶ ಪತ್ರವನ್ನು ಸಾಂಕೇತಿಕವಾಗಿ ನೀಡಲಾಯಿತು.
ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಚೆಕ್ ಮತ್ತು ಸಹಾಯಧನದ ಪತ್ರ ವಿತರಿಸಲಾಯಿತು. ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಪರಿಶಿಷ್ಠ ವರ್ಗಗಳ ಹಾಗೂ ಶಿಕ್ಷಣ ಇಲಾಖೆಯಿಂದ ಪರಿಶಿಷ್ಠ ಜನಾಂಗದ 3 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯಲು ಅನುವಾಗುವಂತೆ ಜ್ಞಾನದರ್ಶನವೆಂಬ ಯೋಜನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್ ನಾಯ್ಕ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ವಿಮಲಾ ನಾಯ್ಕ್, ದಸಂಸ ಮುಖಂಡ ದೀಪಕ್ ಕುಡಾಳಕರ್ ಹಾಗೂ ಪಾಟೀಲ್, ಶಿಕ್ಷಕಿ ವಸಂತಲಕ್ಷ್ಮೀ ಹೆಗಡೆ, ಶಿವರಾಮ್ ಭಾಗ್ವತ್ ಹಾಗೂ ಇತರರು ಇದ್ದರು.