ಉಡುಪಿ, ಮೇ16: ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಗಲಭೆ ನಡೆಸಲು ಹಣ ಪಡೆದಿರುವ ಕುರಿತು ಚಿತ್ರೀಕರಿಸಲಾದ ಸಿಡಿಯ ನಕಲನ್ನು ನಮಗೆ ಒದಗಿಸಿದರೆ, ಅದನ್ನು ಪರಿಶೀಲಿಸಿ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದ್ದಾರೆ.
ಉಡುಪಿಯಲ್ಲಿಂದು ಅವರು ಸುದ್ದಿಗಾರರ ಜೊತೆ ಮಾತನಾಡಿದರು. ರೆಡ್ಡಿ ಸಹೋದರರು ಹಾಗೂ ರಾಜ್ಯಪಾಲರ ನಡುವಿನ ಬಿಕ್ಕಟ್ಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕೀಯದಲ್ಲಿ ಇವೆಲ್ಲ ಸಾಮಾನ್ಯ. ಅದಕ್ಕೆಲ್ಲ ಪರಿಹಾರ ಇದ್ದೇ ಇದೆ. ಯಾವುದೇ ಸಂದರ್ಭದಲ್ಲೂ ಬಿಕ್ಕಟ್ಟುಗಳನ್ನು ಎದುರಿಸುವ ಶಕ್ತಿ ನಮ್ಮ ಸರಕಾರಕ್ಕೆ ಇದೆ. ಅವುಗಳನ್ನು ನಿಭಾಯಿಸಿ ಮೂರು ವರ್ಷ ರಾಜ್ಯಭಾರ ಮಾಡುತ್ತೇವೆ ಎಂದರು.