ಭಟ್ಕಳ: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಭಟ್ಕಳ ಹಾಗೂ ಜಾಲಿ ಪಟ್ಟಣ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರದಂದು ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯು ನಡೆಯಿತು.
76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಸಹಾಯಕ ಆಯುಕ್ತೆ ಡಾ. ನಯನಾ ಎನ್. ನೆರವೇರಿಸಿ ಮಾತನಾಡಿದ ಅವರು
ಭಾರತದಲ್ಲಿ ಸ್ವಾತಂತ್ರ್ಯ ದಿನ ಅತಿ ಪ್ರಮುಖವಾದ ದಿನ ಏಕೆಂದರೆ ಬ್ರಿಟಿಷರ ಕಪಿ ಮುಷ್ಟಿಯಿಂದ ಭಾರತ ಮಾತ ಮುಕ್ತಿ ಹೊಂದಿದ ದಿನವಿದು. ಈ ಸ್ವಾತಂತ್ರ್ಯದ ಹೋರಾಟದ ಯಾತ್ರೆ ಅತ್ಯಂತ ದೀರ್ಘವಾದುದು. ಸುಮಾರು 200ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮ ದೇಶವನ್ನು ಆಳಿದ ಬ್ರಿಟಿಷರನ್ನು ಭಾರತದಿಂದ ಹೊರದಬ್ಬಿದ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಜವಾಹರಲಾಲ ನೆಹರು, ಡಾ.ಬಿ.ಆರ್.ಅಂಬೇಡ್ಕರ, ಸರ್ದಾರ್ ವಲ್ಲಭಬಾಯಿ ಪಟೇಲರಂತಹ ಹಿರಿಯರ ಜೊತೆಗೆ ಲಾಲಾ ಲಜಪತರಾಯ್, ಚಂದ್ರಶೇಖರ ಆಜಾದ್, ಭಗತ ಸಿಂಗ್, ರಾಣಿ ಲಕ್ಷ್ಮೀಬಾಯಿ, ಖದರಾಮ ಬೋಸ್, ಮಂಗಲಪಾಂಡೆ, ಬಾಲಗಂಗಾಧರ ತಿಲಕ, ಗೋಪಾಲಕೃಷ್ಣ ಗೋಖಲೆಯಂತಹ ಬಿಸಿರಕ್ತದ ಕ್ರಾಂತಿಕಾರಿಗಳ ತ್ಯಾಗ ಮತ್ತು ನಿರಂತರ ಹೋರಾಟದಿಂದ ನಾವಿಂದು ಸುಖವಾಗಿ ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆ. ಅವರನ್ನೆಲ್ಲಾ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ನಾವು ನೆನೆಯಬೇಕಾಗಿದೆ ಎಂದರು.
ದೇಶವು ಈ 11 ವರ್ಷಗಳಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ತಂತ್ರಜ್ಞಾನ, ಕ್ರೀಡೆ, ಶಿಕ್ಷಣ, ಹಣಕಾಸು, ಮೂಲಭೂತ ಸೌಕರ್ಯ, ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಬಹಳಷ್ಟು ಮುಂದುವರೆದಿದೆ. ಜುಲೈ 4ರಂದು ಚಂದ್ರಯಾನ-3 ಉಪಗ್ರಹವನ್ನು ಹಾರಿಸಿದ್ದೇವ ಅದು ಇದೇ ಆಗಸ್ಟ್-24ಕ್ಕೆ ಚಂದ್ರನ ಮೇಲೆ ಇಳಿಯಲಿದೆ. ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಎಂಬ ಹಿರಿಮೆಗೆ ನಮ್ಮ ದೇಶ ಪಾತ್ರವಾಗಿದೆ.
ರಕ್ಷಣೆ ಮತ್ತು ಸೇನಾ ಶಕ್ತಿಯ ವಿಷಯದಲ್ಲಿ ನಮ್ಮ ದೇಶ ಅತ್ಯಂತ ಬಲಿಷ್ಟವಾಗಿದೆ. ಆತ್ಯಾಧುನಿಕ ಉಪಕರಣಗಳಿಂದ ನಮ್ಮ ಸೇನಾಪಡೆ ದೇಶದ ರಕ್ಷಣೆಗೆ ಸದಾ ಸನ್ನದ್ಧವಾಗಿದೆ. ನಾವು ಇಷ್ಟು ಸಂತೋಷದಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆಯೆಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ, ಹಗಲು ರಾತ್ರಿ ನಮ್ಮ ದೇಶದ ಗಡಿಗಳನ್ನು ಕೆಚ್ಚೆದೆಯಿಂದ ಕಾಯುವ ಸೈನಿಕರ ತ್ಯಾಗದಿಂದ ನಾವೆಲ್ಲರೂ ಸುಖವಾಗಿದ್ದೇವೆ.
ಕೃಷಿ ಕ್ಷೇತ್ರದಲ್ಲಿ ನಾವು ಅಸಾಧಾರಣ ಪ್ರಗತಿ ಸಾಧಿಸಿದ್ದೇವೆ. ಆಹಾರ ಧಾನ್ಯಗಳನ್ನು ನಾವು ಜಗತ್ತಿನ ಇತರ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದೇವೆ.
ಭಾರತ ಇಂದು ಇಡೀ ಜಗತ್ತಿನ ವಿಶ್ವಗುರುವಾಗಿ ಬೆಳೆಯುತ್ತಿದೆ.
ಇಂದಿನ ನವಭಾರತದ ಪ್ರಖರತೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವವನ್ನು ತ್ಯಾಗ ಮಾಡಿದ ಚೇತನಗಳು ಇವು ಎಂದಿಗೂ ಮರೆಯಬಾರದು. ಆ ಮಹಾನ್ ಚೇತನಗಳಿಗೆ ನೂರಾರು ನಮಗಳ ಮತ್ತು ಶ್ರದ್ಧಾಂಜಲಿಗಳನ್ನು ಅರ್ಪಿಸಬೇಕು ಎಂದರು.
ಭಟ್ಕಳ ತಹಸಿಲ್ದಾರ್ ತಿಪ್ಪಿಸ್ವಾಮಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೆರ್ ಧನ್ಯವಾದ ಅರ್ಪಿಸಿದರು. ಡಿ.ವೈ.ಎಸ್.ಪಿ ಶ್ರೀಕಾಂತ್ ಕೆ., ಪುರಸಭೆ ಮುಖ್ಯಾಧಿಕಾರಿ ಸುರೇಶ್ ಎನ್.ಕೆ., ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ, ಜಾಲಿ ಪ.ಪಂ ಮುಖ್ಯಾಧಿಕಾರಿ ಮಂಜಪ್ಪ ಎನ್., ಭಟ್ಕಳ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡ, ಇಂಗ್ಲಿಷ್, ಉರ್ದು ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಐವರು ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಆಕರ್ಷಕ ಪಥಸಂಚಲನ ಮಾಡಿದ ಉತ್ತಮ ತಂಡಗಳಿಗೆ, ನಗರದಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಿದ ಹೆಸ್ಕಾಂ ಸಿಬ್ಬಂಧಿಗಳಿಗೆ ಹಾಗೂ ಭಾಷಣ ಮತ್ತು ಪೋಸ್ಟರ್ ತಯಾರಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.