ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 52 ಕೋಟಿ ರೂ ವೆಚ್ಚದಲ್ಲಿ ಬೂದಗುಂಡ್ಲ ಡ್ಯಾಮ್ ನಿರ್ಮಾಣ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

52 ಕೋಟಿ ರೂ ವೆಚ್ಚದಲ್ಲಿ ಬೂದಗುಂಡ್ಲ ಡ್ಯಾಮ್ ನಿರ್ಮಾಣ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Sun, 31 Jul 2022 01:33:17  Office Staff   SO News

ಚಿಕ್ಕಬಳ್ಳಾಪುರ : ವಿಶ್ವೇಶ್ವರಯ್ಯ ಜಲ ಭಾಗ್ಯ ನಿಗಮದಿಂದ ಸುಮಾರು 52 ಕೋಟಿ ರೂ ವೆಚ್ಚದಲ್ಲಿ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯ ದೊಡ್ಡಪೈಲಗುರ್ಕಿ ಭಾಗದಲ್ಲಿ ಬೂದಗುಂಡ್ಲ ಡ್ಯಾಮ್ ಅನ್ನು ನಿರ್ಮಿಸಿ ಪ್ರತಿ ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರನ್ನು ಪೂರೈಸುವ ಕಾರ್ಯ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು. 

ಅವರು ಶನಿವಾರ ತಾಲ್ಲೂಕಿನ ಲಕ್ಕನಾಯಕನಹಳ್ಳಿ, ರಾಯಪ್ಪನಹಳ್ಳಿ ಹಾಗೂ ಚಲಕಾಯಲಪರ್ತಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅಂದಾಜು ತಲಾ 51.80 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಮನೆ ಮನೆಗೆ ನಲ್ಲಿ ನೀರು ಸಂಪರ್ಕ ನೀಡುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 

ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಸ್ವಚ್ಚತೆ ಮೂಲ ಸೌಕರ್ಯಗಳಾಗಿವೆ. ಆ ನಿಟ್ಟಿನಲ್ಲಿ ಕಳೆದ 7 ವರ್ಷದಲ್ಲಿ ದೇಶದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸುಮಾರು 10 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಿಂದ ಸ್ವಚ್ಚತೆ ಹಾಗೂ ಉತ್ತಮ ಆರೋಗ್ಯ ವೃದ್ಧಿ ಗೆ  ಸಹಕಾರಿಯಾಗಿದೆ  ಎಂದು ಹೇಳಿದರು.
 
ಕೇಂದ್ರ ಹಾಗೂ ರಾಜ್ಯ ಸರ್ಕಾರವು ದೇಶದ ಪ್ರತಿ ಗ್ರಾಮದ ಮನೆ ಮನೆಗೆ ನಲ್ಲಿ ಮೂಲಕ ನೀರನ್ನು ಪೂರೈಸಲು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲು ಎಚ್.ಎನ್.ವ್ಯಾಲಿ ಯೋಜನೆಯಡಿ ಶುದ್ಧಿಕರೀಸಿದ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ 2023 ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಗೆ ಎತ್ತಿನ ಹೊಳೆ ನೀರನ್ನು ಹರಿಸುವ ಪ್ರಯತ್ನ ಮಾಡಲಾಗುವುದು ಎಂದರು. 

ಜಿಲ್ಲೆಯ ರೈತರಿಗೆ ಕೃಷಿ ನೀರಾವರಿ, ಸ್ತ್ರೀಶಕ್ತಿ ಸಂಘಗಳ ಸೌಲಭ್ಯಗಳ  ವಿಸ್ತರಣೆ , ಮಹಿಳೆಯರ ಸಬಲೀಕರಣ, ಯುವಜನತೆಯ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಆ ನಿಟ್ಟಿನಲ್ಲಿ  ಕೈಗಾರಿಕಾ ಪ್ರದೇಶಗಳಿಗೆ ಈವರೆಗೆ 3,000 ಎಕರೆ ಜಮೀನನ್ನು ಗುರ್ತಿಸಲಾಗಿದ್ದು, ಶೀಘ್ರದಲ್ಲಿಯೇ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಮಾಡಿ ದೊಡ್ಡ ಕೈಗಾರಿಕೆಗಳನ್ನು ನಿರ್ಮಿಸಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
 
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಿಸೆಂಬರ್ ಅಂತ್ಯದೊಳಗೆ ಗ್ರಾಮೀಣ ಭಾಗದಲ್ಲಿ ಸುಮಾರು 10 ಸಾವಿರ ಹಾಗೂ ನಗರ ಪ್ರದೇಶದಲ್ಲಿ 5 ಸಾವಿರ ಒಟ್ಟು 15 ಸಾವಿರ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡೇ  ತಿರುತ್ತೇನೆ. ಅಲ್ಲದೆ  ಕೇಂದ್ರ ಸರ್ಕಾರ ಸುಮಾರು 3 ಕೋಟಿ ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಮನೆ ನಿರ್ಮಿಸಿರುವುದು ಶ್ಲಾಗನೀಯ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪಿ.ಶಿವಶಂಕರ್ ಮಾತನಾಡುತ್ತಾ,ಕಳೆದ ಎರಡು  ವರ್ಷಗಳಲ್ಲಿ  ಉತ್ತಮ  ಮಳೆಯಾದ  ಕಾರಣ  ಪ್ರಸ್ತುತ ಸುಸ್ಥಿರ ಜಲಮೂಲಗಳು ಸಿಕ್ಕಿದ್ದು, 200-300 ಅಡಿಯಲ್ಲಿ ನೀರು  ದೊರೆಯುತ್ತಿರುವುದು ಕೃಷಿಕರಿಗೆ ಸಂತಸ ವಿಚಾರವಾಗಿದೆ ಎಂದರು. 

ಜಲ ಜೀವನ್ ಮಿಷನ್ ಯೋಜನೆಯಡಿ   ದಿನನಿತ್ಯ ಪ್ರತಿ  ವ್ಯಕ್ತಿಗೆ 55 ಲೀಟರ್ ನೀರನ್ನು ನೀಡುವ ಉದ್ದೇಶದಿಂದ ಪ್ರತಿ ಮನೆ ಮನೆಗೆ ನಲ್ಲಿ ಮೂಲಕ ನೀರನ್ನು ಪೂರೈಸುವ  ಯೋಜನೆ  ಜಿಲ್ಲೆಯಲ್ಲಿ ನಿರಂತರ   ಚಾಲನೆಯಲ್ಲಿದೆ  ಎಂದರು.

ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 600 ಕೋಟಿ ರೂಗಳನ್ನು ಕುಡಿಯುವ ನೀರು  ಪೂರೈಕೆಗಾಗಿ ಮೀಸಲಿಡಲಾಗಿದೆ. ಇದರಿಂದ ಕುಡಿಯುವ ನೀರಿನ ಅಭಾವನ್ನು ನಿವಾರಣೆ ಯಾಗುವುದು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಎ.ಪಿ.ಎಂ.ಸಿ ಮಾರುಕಟ್ಟೆಯ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ತಹಸೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು. 

ಸಚಿವರ ಇಂದಿನ ಕಾರ್ಯಕ್ರಮಗಳ ವಿವರ :  ಮೊದಲಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಲಕ್ಕನಾಯಕನಹಳ್ಳಿ, ರಾಯಪ್ಪನಹಳ್ಳಿ ಹಾಗೂ ಚಲಕಾಲಯಪರ್ತಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ತಲಾ 51.80 ಲಕ್ಷ ರೂ ವೆಚ್ಚದಲ್ಲಿ ಮನೆಮನೆಗೆ ನಲ್ಲಿ ನೀರು ಸಂಪರ್ಕ ನೀಡುವ ಕಾಮಗಾರಿಯ ಭೂಮಿಪೂಜೆ ನೆರವೇರಿಸಿಕೊಟ್ಟರು. 

ನಂತರ ತಾಲ್ಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 12 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಎರಡು "ಹೆಚ್ಚುವರಿ ಕೊಠಡಿಗಳ" ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಹಾಗೂ ಗಂಗರೇಕಾಲುವೆ ಗ್ರಾಮದಲ್ಲಿ 12 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ "ಡಾ.ಬಿ.ಆರ್.ಅಂಬೇಡ್ಕರ್ ಭವನ" ಕಟ್ಟಡದ ಉದ್ಘಾಟನೆ ಮಾಡಿದರು. 
ಅಲ್ಲಿಂದ ಪುಟ್ಟತಿಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮದಿಂದ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕ ನೆಲಭರ್ತಿ ಜಾಗಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣದ 70 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.

ಆ ನಂತರ ವಾಪಸಂದ್ರ ಗ್ರಾಮದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣದ 22 ಲಕ್ಷ ರೂ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 11 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಒಂದು ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿದರು.


Share: