ಭಟ್ಕಳ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಭಟ್ಕಳ ಅಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಮಾರಿಜಾತ್ರಾ ಮಹೋತ್ಸವವು.10 ಮತ್ತು 11ರ೦ದು ವಿಜೃಂಭಣೆಯಿಂದ ನೆರವೇರಲಿದೆ.
ಅಳೇಕೋಡಿ ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಶ್ರೀ ದೇವಿಯ ಕೃಪಾಶೀರ್ವಾದದಂತೆ 2013ರಿಂದ ಅಳೇಕೋಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಪ್ರತಿ 2 ವರ್ಷಗಳಿಗೊಮ್ಮೆ ಮಾರಿಜಾತ್ರೆಯನ್ನು ನಡೆಸಿಕೊಂಡು
ಬರಲಾಗಿದ್ದು ಕರೋನ ಕಾರಣದಿಂದಾಗಿ 20210 ಜಾತ್ರೆಯನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ.
ಇದೀಗ 4 ವರ್ಷಗಳ ನಂತರ ಮತ್ತೆ 5ನೇ ಬಾರಿ ಉತ್ಸವ ಆಚರಣೆಗೆ ದೇವಿಯ ಅನುಮತಿಯನ್ನು ಪಡೆಯಲಾಗಿದೆ. ಮಾರಿಜಾತ್ರೆಯ ಅಂಗವಾಗಿ ಜ.9ರಂದು ಸಂಜೆ 3 ಗಂಟೆಗೆ ಭಕ್ತಾದಿಗಳು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಕಾಯಿ, ಹೂ, ಹಣ್ಣು,ಬಳೆ, ಸೀರೆ, ಆರಿಸಿನ, ಕುಂಕುಮ ಇತ್ಯಾದಿ ಸುವಾಸನೆಯುಕ್ತ ದ್ರವ್ಯಗಳೊಂದಿಗೆ ಅಲ್ಲಿಂದ ಹೊರಟು ಸಂಜೆ 3.45ಕ್ಕೆ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯನ್ನು ಅರ್ಪಿಸಲಾಗುತ್ತದೆ. ನಂತರ ಬೈಕ್ ರಾಲಿಯ ಮೂಲಕ ಶಿರಾಲಿ, ಸಾರದಾಹೊಳೆ,ಮಾವಿನಕಟ್ಟೆ
ಯಕ್ಷೆಮನೆ,ಸಣ್ಣಬಾವಿ,ಮಾರ್ಗವಾಗಿ
ಶ್ರೀ ರಾಮ ಭಜನಾ ಮಂದಿರವನ್ನು ತಲುಪಿ ಅಲ್ಲಿಂದ ವಾದ್ಯಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರೆಕಾಣಿಕೆಯನ್ನು ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಕ್ಕೆ ತರಲಾಗುತ್ತದೆ.
ಸಂಜೆ 7 ಗಂಟೆಗೆ ಶ್ರೀ ಮಾರಿಕಾಂಬೆ ಮತ್ತು ಮಾತಂಗಿ ಮೂರ್ತಿಯನ್ನು ದೇವಸ್ಥಾನದ ಸಭಾಭವನದ ಎದುರಿನ ಗದ್ದುಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ನಂತರ ಶ್ರೀ ದೇವಿಗೆ ದೀಪ ಸ್ಥಾಪನೆ, ಮಹಾ ಪಾರ್ಥನೆ, ಫಲ ಸಮರ್ಪಣೆ, ಅಡುಗೆ ಛತ್ರದಲ್ಲಿ ಒಲೆಗೆ ಅಗ್ನಿ ಪ್ರತಿಷ್ಟಾಪನೆ,
ಗಣಪತಿ ಪೂಜನೆ, ಪುಣ್ಯಾಹವಾಚನ, ಸ್ಥಳ ಶುದ್ಧಿ, ರಾಕೋಫ್ಟ್ ಹವನ, ದಿಕ್ಷಾಲಬಲಿ, ಹೊಸ ಆಭರಣಗಳ ಸಮರ್ಪಣೆ ದಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಜ.10ರಂದು ಬೆಳಿಗ್ಗೆ 6 ಗಂಟೆಗೆ ದೇವತಾ ಪ್ರಾರ್ಥನೆ. ಗಣಪತಿ ಪೂಜೆ ಸೇರಿದಂತೆ ವಿವಿಧ ವೈದಿಕ ವೈದಿಕ ಕಾರ್ಯಕ್ರಮಗಳೊಂದಿಗೆ 8.20 ಮಾರಿಕಾಂಬೆಗೆ ಪ್ರತಿಷ್ಠಾಪನೆ, ಮಂಗಳಾಷ್ಟಕ, ವೇದಘೋಷ, ವಾದ್ಯಗಳೊಂದಿಗೆ ಮಂಗಳಾರತಿಯ ನಂತರ ಭಕ್ತಾದಿಗಳ ಸೇವೆ ಆರಂಭವಾಗಲಿದೆ.
ಸ್ವಾಮೀಜಿಗಳಿಂದ ಧರ್ಮ ಸಭೆ: ಜ.10ರಂದು 11 ಗಂಟೆಗೆ ಚಿತ್ರಾಪುರ ಶ್ರೀ ಮಠದ ಮಠಾಧೀಶ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರಿಂದ ಶ್ರೀ ದೇವರ ದರ್ಶನ, ಧರ್ಮ ಸಭೆ ನಡೆಯಲಿದೆ. 11.308 ಮಾರಿಕಾಂಬಾ ದೇವಿಯ ಸಾನಿಧ್ಯದಲ್ಲಿ ನೈವೇದ್ಯ ಮತ್ತು ಮಹಾಮಂಗಳಾರತಿ, ಮಹಾ ಅನ್ನಸ೦ತರ್ಪಣೆ ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಭಜನಾ ಕಾರ್ಯಕ್ರಮ, ಸಂಜೆ 6 ಗಂಟೆಗೆ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶ ಮಹಾ ಸ್ವಾಮಿಗಳು ದೇವಸ್ಥಾನಕ್ಕೆ ಆಗಮಿಸಿ ಧರ್ಮ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 9 ಗಂಟೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕದಂಬ ಕೌಶಿಕೆ, ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜ.11ರಂದು ಸುಪ್ರಭಾತ ಪೂಜೆಯ ನಂತರ ಭಕ್ತರ ಸೇವೆ ಆರಂಭವಾಗಲಿದ್ದು, ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶ್ರೀ ದೇವರ ದರ್ಶನ ಪಡೆದು ಧರ್ಮ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಶ್ರೀ ಮಾರಿಕಾಂಬೆ ಮತ್ತು ಶ್ರೀ ವಾತಾಂಗಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಚಂಡೆ, ಗೊಂಬೆ ಕುಣಿತ, ವಿವಿಧ ಸ್ತಬ್ದ ಚಿತ್ರಗಳು ವಿಶೇಷ ಆಕರ್ಷಣೆಯಾಗಲಿವೆ. ಮಾರ್ಗ ಮಧ್ಯೆ ಗಡಿವೀರ ಸ್ಥಳ, ಮಠದ ಜಟ್ಟ ಸ್ಥಳ, ತಣ್ಣೀರು ಕಟ್ಟೆ. ದೇವಿ ಅಮ್ಮನ ಮನೆ, ಮಾವಿನಕಟ್ಟೆ, ಸಾರದಾಹೊಳೆ, ಶಿರಾಲಿ, ಗುಡಿಹಿತ್ತಲ್ ಕ್ರಾಸ್‌ಗಳಲ್ಲಿ ಬಲಿಪೂಜೆ, ಚರುಕುತ್ಕಾಂಡ, ದೊಂದಿ, ಕುಂಕುಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ರಾತ್ರಿ 9 ಗಂಟೆಗೆ ಕಂಚಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿಮೂರ್ತಿ ಮತ್ತು ಮಾತಾಂಗಿ ಮೂರ್ತಿಗಳಿಗೆ ದೃಷ್ಟಿ, ದೀಪಾಗ್ನಿ ಇತ್ಯಾದಿ ಕಾರ್ಯಕ್ರಮಗಳ ನ೦ತರ ವೆಂಕಟಾಪುರ ಹೊಳೆಯಲ್ಲಿ ಮೂರ್ತಿ ವಿಸರ್ಜನಾ ಕಾರ್ಯ ನೆರವೇರಲಿದೆ. 2 ದಿನಗಳ ಈ ಮಾರಿಜಾತ್ರೆಯಲ್ಲಿ ಸರಿಸುಮಾರು 3 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು. ಮಾರಿ ವಿಸರ್ಜನೆ ಮೆರವಣಿಗೆಯಲ್ಲಿ 60-70 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ರೆಯ ಪ್ರಯುಕ್ತ ಶಿರಾಲಿಯಿಂದ ಅಲ್ವೇಕೋಡಿಗೆ ಬರುವ ಭಕ್ತರಿಗೆ ದೇವಸ್ಥಾನದ ವತಿಯಿ೦ದ ಉಚಿತ ವಾಗಿ ವಾಹನಗಳನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಕಮಿಟಿಯ ನಾರಾಯಣ ದೈಮನ, ಅರವಿಂದ ಪೈ, ಹನುಮಂತ ನಾಯ್ಕ, ಮಾರಿ ಜಾತ್ರಾ ಸಮಿತಿಯ ಬಿಳಿಯಾ ನಾಯ್ಕ, ದೇವಪ್ಪ ಮೊಗೇರ, ಪಾಂಡುರಂಗ ಮೊಗೇರ, ಯಾದವ ಮೊಗೇರ, ಮಂಜುನಾಥ ಕೋಡಿಹಿತ್ತು. ಚಂದ್ರಕಾಂತ ಮೊಗೇರ, ದುರ್ಗಾದಾಸ ಮೊಗೇರ,ಈರಯ್ಯ ಮೊಗೇರ,ನಾಗಪ್ಪ ದೈಮನೆ ಮುಂತಾದವರಿದ್ದರು.