ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ರೋಗದ ಸನ್ನಿವೇಶವಿದ್ದ 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಗೂಲಿ ಕಾರ್ಮಿಕರು, ಸ್ವಉದ್ಯೋಗಿಗಳು, ನಿರುದ್ಯೋಗಿಗಳು ಹಾಗೂ ಕೃಷಿ ವಲಯದಲ್ಲಿ ತೊಡಗಿಸಿ ಕೊಂಡ ಜನರು ಅಗ್ರ ಸ್ಥಾನದಲ್ಲಿದ್ದಾರೆ ಎಂದು ಎನ್ಸಿಆರ್ಬಿ(ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ) ಸೋಮವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ಸಿಆರ್ಬಿ) ವರದಿ ಪ್ರಕಾರ ದೇಶಾದ್ಯಂತ 2021ರಲ್ಲಿ ಒಟ್ಟು 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಒಟ್ಟು 1,18,979 ಪುರುಷರಲ್ಲಿ ದಿನಗೂಲಿ ಕಾರ್ಮಿಕರು (37,751), ಸ್ವ ಉದ್ಯೋಗಿಗಳು (18,803) ಹಾಗೂ ನಿರುದ್ಯೋಗಿಗಳು (11,724) ಗರಿಷ್ಠ ಸಂಖ್ಯೆಯಲ್ಲಿ ಇದ್ದಾರೆ. ದೇಶದಲ್ಲಿ ಈ ಅವಧಿಯಲ್ಲಿ ಒಟ್ಟು 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ.
2021ರಲ್ಲಿ 1.64 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 2020ಕ್ಕಿಂತ ಶೇ.7.2 ಹೆಚ್ಚು. 2020ರಲ್ಲಿ 1.53 ಲಕ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. 2019ರಲ್ಲಿ ಈ ಅಂಕಿ-ಅಂಶ ಸುಮಾರು 1.39 ಲಕ್ಷ ಇತ್ತು ಎಂದು ವರದಿ ಹೇಳಿದೆ. 2021ರಲ್ಲಿ ಆತ್ಮಹತ್ಯೆಯ ದರ-ಪ್ರತೀ ಒಂದು ಲಕ್ಷ ಜನಸಂಖ್ಯೆಗೆ 12 ಆಗಿದೆ. ಇದು 1967ರ ಬಳಿಕ ಆತ್ಮಹತ್ಯೆ ಸಂಖ್ಯೆಯ ಅತ್ಯಧಿಕ ದರ. ಇದುವರೆಗೆ ದಾಖಲಾದ ಅತ್ಯಧಿಕ ಆತ್ಮಹತ್ಯೆ ದರ 11.3. ದೇಶದಲ್ಲಿ ಇದು 2010ರಲ್ಲಿ ವರದಿಯಾಗಿತ್ತು.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯ ಆತ್ಮಹತ್ಯೆ ವರದಿಯಾಗಿದೆ. ಅಲ್ಲಿ 2021ರಲ್ಲಿ 22,207 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನಂತರ ತಮಿಳುನಾಡಿನಲ್ಲಿ 18,925, ಮಧ್ಯಪ್ರದೇಶದಲ್ಲಿ 14,965, ಪಶ್ಚಿಮಬಂಗಾಳದಲ್ಲಿ 13,500 ಹಾಗೂ ಕರ್ನಾಟಕದಲ್ಲಿ 13,056 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈ ಐದು ರಾಜ್ಯಗಳಲ್ಲಿ ಒಟ್ಟು ಶೇ. 50.4 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಕಳೆದ ವರ್ಷ ಆತ್ಮಹತ್ಯೆಗೆ ಪ್ರಮುಖ ಕಾರಣ ಕೌಟುಂಬಿಕ ಸಮಸ್ಯೆ ಹಾಗೂ ಅನಾರೋಗ್ಯ. ಅದು ಅನುಕ್ರಮವಾಗಿ ಶೇ. 33.2 ಹಾಗೂ 18.6. ಎಂದು ವರದಿ ಹೇಳಿದೆ.